ಸುಪ್ರೀಂ ಬಿಕ್ಕಟ್ಟಿಗೆ ಪರಿಹಾರ ನ್ಯಾ. ಕುರಿಯನ್ ವಿಶ್ವಾಸ

ಕೊಚ್ಚಿ, ಜ. ೧೩- ಸರ್ವೋಚ್ಛ ನ್ಯಾಯಾಲಯದಲ್ಲಿ ನಡೆಯುತ್ತಿರುವ ತಾರತಮ್ಯ ವಿವಾದ ಶೀಘ್ರದಲ್ಲೇ ಪರಿಹಾರ ದೊರೆಯುವ ವಿಶ್ವಾಸವಿದೆಯೆಂದು ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಹೇಳಿದ್ದಾರೆ.

ನಿನ್ನೆಯಷ್ಟೇ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ತಿರುಗಿ ಬಿದ್ದು ಪ್ರಕರಣಗಳನ್ನು ನಿಗದಿಮಾಡುವ ವಿಚಾರದಲ್ಲಿ ಲೋಪಗಳು ಉಂಟಾಗಿವೆ ಎಂದು ಆರೋಪಿಸಿದ್ದರು.

ನ್ಯಾಯಾಂಗ ಮತ್ತು ನ್ಯಾಯಾಧೀಶರ ಹಿತಾಸಕ್ತಿ ಗಮನವಿಟ್ಟುಕೊಂಡು ಮುಖ್ಯ ನ್ಯಾಯಮೂರ್ತಿಗಳು ನಿಧಾನವಾಗಿ ಸಮಸ್ಯೆ ಬಗೆಹರಿಸುತ್ತಾರೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ತಾವು ಶಿಸ್ತನ್ನು ಉಲ್ಲಂಘಿಸಿದ್ದೇನೆ ಎಂಬ ಆರೋಪಗಳನ್ನು ತಳ್ಳಿಹಾಕಿರುವ ಅವರು, ಸುಪ್ರೀಂಕೋರ್ಟ್‌ನ ಆಡಳಿತದಲ್ಲಿ ಮತ್ತು ಪಾರದರ್ಶಕತೆ ತರಲು ನೆರೆವಾಗಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ನ್ಯಾಯಾಂಗ ವ್ಯವಸ್ಥೆಯಲ್ಲಿ ಜನರಿಗೆ ನಂಬಿಕೆ ಬರುವ ರೀತಿಯಲ್ಲಿ ನ್ಯಾಯಾಧೀಶರು ವರ್ತಿಸಬೇಕೆಂದು ಕುರಿಯನ್ ಜೋಸೆಫ್ ವಿವರಿಸಿದರು.

ದೆಹಲಿಯಲ್ಲಿ ನಿನ್ನೆ ನಾಲ್ವರು ಹಿರಿಯ ನ್ಯಾಯಾಧೀಶರು ಸುದ್ದಿಗೋಷ್ಠಿ ನಡೆಸಿ, ಸುಪ್ರೀಂಕೋರ್ಟ್‌ನಲ್ಲಿರುವ ಲೋಪದೋಷಗಳನ್ನು ಬಹಿರಂಗಪಡಿಸಿ, ಮುಖ್ಯ ನ್ಯಾಯಾಧೀಶರ ವಿರುದ್ಧವೇ ಗಂಭೀರ ಆರೋಪಗಳು ಮಾಡಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ಈ ಬಿಕ್ಕಟ್ಟಿಗೆ ಪರಿಹಾರ ದೊರೆಯದಿದ್ದರೆ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುವುದಿಲ್ಲ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದರು.

Leave a Comment