ಸುಪ್ರೀಂ ತೀರ್ಪಿನ ಬಗ್ಗೆ ಭಯವಿಲ್ಲ – ರಮೇಶ್, ಮಹೇಶ್

ಮೈಸೂರು. ನ.8: ರಾಜಕೀಯ ನಾಯಕರು ಟೆಂಪಲ್ ರನ್ ನಡೆಸಿದ್ದಾರೆ. ನಿನ್ನೆ ನಗರಕ್ಕಾಗಮಿಸಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನಂಜನಗೂಡು ನಂಜುಡೇಶ್ವರನ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಇಂದು ಅನರ್ಹ ಶಾಸಕರೆಂದು ಗುರುತಿಸಿಕೊಂಡಿರುವ ರಮೇಶ್ ಜಾರಕಿ ಹೊಳಿ, ಮಹೇಶ್ ಕಮಟಳ್ಳಿ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇಂದು ಮೈಸೂರಿನಲ್ಲಿ ಚಾಮುಂಡಿ ದೇವಿ ದರ್ಶನ ಪಡೆದು ನಂತರ ಮಾತನಾಡಿದ ರಮೇಶ್ ಜಾರಕಿ ಹೊಳಿ ನನ್ನ ಶತ್ರುಗಳಿಗೆ ದೇವರು ಒಳ್ಳೆಯದು ಮಾಡಲಿ. ಆದರ ಜೊತೆಗೆ ಆಪ್ತರಾಗಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೂ ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ.
ನನಗೆ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಯಾವ ಭಯವೂ ಇಲ್ಲ. ನನ್ನೂರಿನಲ್ಲಿ ಇದ್ದಿದ್ದರೆ ಕೋಲಾಪುರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗುತ್ತಿದೆ. ಇವತ್ತು ಮೈಸೂರಿನಲ್ಲಿದ್ದೀನಿ ಹಾಗಾಗಿ ಚಾಮುಂಡಿ ದೇವಿ ದರ್ಶನ ಪಡೆದಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ ಡಿಕೆಶಿ ಅವರು ಕೂಡ ಇವತ್ತೇ ಚಾಮುಂಡಿ ದರ್ಶನ ಪಡೆಯುತ್ತಿರುವ ವಿಚಾರದ ಬಗ್ಗೆ ಕೇಳಿದಾಗ ನೋ ಕಾಮೆಂಟ್ಸ್ ಎಂದ ಅವರು, ಸುಪ್ರೀಂ ಕೋರ್ಟ್ ತೀರ್ಪು ನಮ್ಮ ಪರವಾಗಿ ಬರುತ್ತೆ ಎಂಬ ವಿಶ್ವಾಸವಿದೆ. ತೀರ್ಪು ಏನಾಗುತ್ತೆ ಅದು ಆಗಲಿ ಬಿಡಲಿ. ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಕ್ಕರೆ ಸಾಕು, ನೋಡೋಣ ಏನಾಗುತ್ತೆ ಎಂದರು.
ರಮೇಶ್ ಜಾರಕಿಹೊಳಿ ಜೊತೆ ಮತ್ತೋರ್ವ ಅನರ್ಹ ಶಾಸಕ ಮಹೇಶ್ ಕಮಟಳ್ಳಿ ಕೂಡ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದು, ದೇವರ ದರ್ಶನಕ್ಕೂ ಸುಪ್ರೀಂ ಕೋರ್ಟ್ ತೀರ್ಪಿಗೂ ಸಂಬಂಧ ಇಲ್ಲ. ನಮಗೆ ಒಳ್ಳೆಯದಾಗುತ್ತೆ ಅಂದುಕೊಂಡಿದ್ದೇನೆ. ರಾಜಕೀಯ ಕಾರಣಕ್ಕೆ ಇಲ್ಲಿಗೆ ಬಂದಿಲ್ಲ ಎಂದು ಹೇಳಿದರು.
ಸದ್ಯದಲ್ಲೇ ಸುಪ್ರೀಂ ಕೋರ್ಟ್ ತೀರ್ಪು ಇರುವ ಹಿನ್ನೆಲೆಯಲ್ಲಿ ಇಬ್ಬರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

Leave a Comment