ಸುಪ್ರೀಂ ಅವ್ಯವಸ್ಥೆ ತಿರುಗಿಬಿದ್ದ ಜಡ್ಜ್‌ಗಳು, ಪ್ರಧಾನಿ ಸಮಾಲೋಚನೆ

ನವದೆಹಲಿ, ಜ. ೧೨- ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ವಿರುದ್ಧ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಬಹಿರಂಗವಾಗಿ ತಿರುಗಿ ಬೀಳುವ ಮೂಲಕ ದೇಶದ ಜನತೆ ನಿಬ್ಬೆರಗಾಗುವಂತೆ ಮಾಡಿದ್ದಾರೆ.

ಪಿಎಂ ತುರ್ತು ಸಭೆ
ಸುಪ್ರೀಂ ಕೋರ್ಟ್ ಆಡಳಿತದ ವ್ಯವಸ್ಥೆ ಬಗ್ಗೆ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಅಸಮಾಧಾನ ಹೊರಹಾಕುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹಾಗೂ ಹಿರಿಯ ಅಧಿಕಾರಿಗಳ ತುರ್ತು ಸಭೆ ಕರೆದು ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾರೆ. ಪ್ರಮುಖ ಪ್ರಕರಣಗಳ ವಿಚಾರಣೆಗಾಗಿ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಪೀಠದಿಂದ ವಿಚಾರಣೆ ನಡೆಯಬೇಕೆಂದು ನ್ಯಾಯಮೂರ್ತಿಗಳು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಸಭೆ ಕರೆದಿದ್ದಾರೆ.

ನ್ಯಾ. ದೀಪಕ್ ಮಿಶ್ರಾರವರಿಗೆ ವಾಗ್ದಂಡನೆ ವಿಧಿಸುವಂತೆ ಒತ್ತಾಯಿಸಿರುವ ನಾಲ್ವರು ನ್ಯಾಯಾಧೀಶರು ಬಹಿರಂಗ ಸಮರ ಸಾರಿರುವುದು ವಿಶ್ವದಲ್ಲೇ ಎರಡನೇ ಅತಿದೊಡ್ಡ ಪ್ರಜಾತಂತ್ರ ವ್ಯವಸ್ಥೆಯನ್ನು ಆತಂಕಕ್ಕೆ ದೂಡಿದೆ.

ಸುಪ್ರೀಂ ಕೋರ್ಟ್‌ನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಾಲ್ವರು ನ್ಯಾಯಾಧೀಶರು, ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಬಹಿರಂಗ ಸಮರ ಸಾರಿದ್ದಾರೆ.

ಸರ್ವೋಚ್ಛ ನ್ಯಾಯಾಲಯದ ಆಡಳಿತ ಸರಿಯಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ನ್ಯಾಯಮೂರ್ತಿಗಳಾದ ಚಲಮೇಶ್ವರ್, ರಂಜನ್ ಗೊಗೊಯ್, ಮದನ್ ಲೋಕೂರ್ ಹಾಗೂ ಕುರಿಯನ್ ಜೋಸೆಫ್, ಪ್ರಜಾಪ್ರಭುತ್ವವನ್ನು ಹಾಗೂ ಸುಪ್ರೀಂ ಕೋರ್ಟ್‌ನ ಘನತೆಯನ್ನು ಉಳಿಸುವುದಕ್ಕಾಗಿ ಜನರ ಮುಂದೆ ಅನಿವಾರ್ಯವಾಗಿ ಬಂದಿದ್ದೇವೆ.

ಮುಖ್ಯನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ವಿರುದ್ಧ ಮಹಾಅಭಿಯೋಗ ವಾಗ್ದಂಡನೆ ನಡೆಸುವ ಅಗತ್ಯವಿದೆ. ಈ ಬಗ್ಗೆ ಜನ ನಿರ್ಧರಿಸಲಿದ್ದಾರೆ ಎಂದು ಹೇಳಿದರು.

ಈ ನಡುವೆ ನಾಲ್ವರು ನ್ಯಾಯಮೂರ್ತಿಗಳ ಬಹಿರಂಗ ಸಮರ ಸುದ್ದಿ ಕೇಳುತ್ತಿದ್ದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರೊಂದಿಗೆ ತುರ್ತು ಸಭೆ ನಡೆಸಿ ನ್ಯಾಯಮೂರ್ತಿಗಳು, ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರ ಹಾಗೂ ಪ್ರಮುಖ ಪ್ರಕರಣಗಳನ್ನು ಹಿರಿಯ ನ್ಯಾಯಾಧೀಶರು ನಡೆಸುವ ಸಂಬಂಧ ಚರ್ಚೆ ನಡೆಸಿದರು.

ದೇಶದ ಇತಿಹಾಸದಲ್ಲೇ ಪ್ರಪ್ರಥಮಬಾರಿಗೆ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳು, ಪತ್ರಿಕಾ ಗೋಷ್ಠಿ ನಡೆಸುವ ಮೂಲಕ ಸುಪ್ರೀಂ ಕೋರ್ಟ್‌ನ ಆಡಳಿತ ವ್ಯವಸ್ಥೆ ಹಾಗೂ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಅಸಮಾಧಾನ, ಅತೃಪ್ತಿಯನ್ನು ಹೊರಹಾಕಿದರು.

ನ್ಯಾಯಮೂರ್ತಿ ಚಲಮೇಶ್ವರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಆಡಳಿತ ವ್ಯವಸ್ಥೆ ಸರಿಯಿಲ್ಲ. ನ್ಯಾಯಮೂರ್ತಿಗಳ ನೇಮಕದಲ್ಲಿ ಕೊಲಿಜಿಯಂ ವ್ಯವಸ್ಥೆಯನ್ನು ಪಾಲನೆ ಮಾಡುತ್ತಿಲ್ಲ. ಬೇಕಾಬಿಟ್ಟಿ ನಿರ್ಧಾರ ಕೈಗೊಳ್ಳಲಾಗುತ್ತಿದೆ.

ಆಡಳಿತ ಲೋಪವನ್ನು ಸರಿಪಡಿಸುವಂತೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ದೇಶದ ಜನರ ಮುಂದೆ ಬರುವಂತಾಗಿದೆ ಎಂದು ಹೇಳಿದರು.

ಇಂದು ಪತ್ರಿಕಾಗೋಷ್ಠಿಗೆ ಬರುವ ಮುನ್ನವೂ ಮುಖ್ಯ ನ್ಯಾಯಾಧೀಶರನ್ನು ಭೇಟಿ ಮಾಡಿ ಮನವಿ ಮಾಡಿದೆವು. ಅಲ್ಲದೆ ಪತ್ರವನ್ನೂ ಬರೆಯಲಾಗಿದೆ. ಇದ್ಯಾವುದಕ್ಕೂ ಗಮನ ಹರಿಸಲಿಲ್ಲ.

ಸುಪ್ರೀಂ ಕೋರ್ಟ್‌ನಲ್ಲಿ ನಡೆಯಬಾರದ ಘಟನೆಗಳು ನಡೆಯುತ್ತಿವೆ ಎಂದು ಬೇಸರ ಮತ್ತು ಅಸಮಾಧಾನವನ್ನು ತರಿಸಿದೆ.

ನ್ಯಾಯದಾನ ಮಾಡುವ ದೇಶದ ಅತ್ಯುನ್ನತ ನ್ಯಾಯಾಲಯದಲ್ಲೇ ಆಡಳಿತ ಸರಿಯಿಲ್ಲ. ಇದು ನೋವಿನ ಸಂಗತಿ, ಅದನ್ನು ನೋಡಿಕೊಂಡು ಸುಮ್ಮನಿರಲಾಗದೆ ಜನರ ಮುಂದೆ ಬರುವಂತಾಯಿತು ಎಂದು ಹೇಳಿದರು.

ಆಡಳಿತದ ಲೋಪ ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ, ಯಾವುದೇ ಫಲ ಸಿಗಲಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಮತ್ತು ಪ್ರಜಾತಂತ್ರ ವ್ಯವಸ್ಥೆಯ ಘನತೆಯನ್ನು ಎತ್ತಿಹಿಡಿಯುವ ಅಗತ್ಯ ಇದೆ. ಹೀಗಾಗಿ ತಮ್ಮ ಅಸಮಾಧಾನ ಮತ್ತು ಅತೃಪ್ತಿಯನ್ನು ಹೊರಹಾಕುವಂತಾಯಿತು ಎಂದರು.

ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದಿರುವ ಪತ್ರವನ್ನು ನೋಡಿದರೆ, ಸುಪ್ರೀಂ ಕೋರ್ಟ್‌ನಲ್ಲಿನ ಆಡಳಿತ ವ್ಯವಸ್ಥೆ, ಲೋಪದೋಷ ನಿಮಗೆ (ಮಾಧ್ಯಮದವರಿಗೆ) ಅರ್ಥವಾಗಲಿದೆ. ನ್ಯಾಯಾಂಗ ವ್ಯವಸ್ಥೆ ಮುಕ್ತವಾಗಿರದ ಹೊರತು ಪ್ರಜಾತಂತ್ರ ಬಲಿಷ್ಠಗೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ನ್ಯಾಯಮೂರ್ತಿ ರಂಜನ್ ಗೊಗೊಯ್ ಮಾತನಾಡಿ, ನ್ಯಾಯಮೂರ್ತಿ ಲೋಯಾ ಸಾವಿನ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುವ ಸಂಬಂಧ ನ್ಯಾಯಮೂರ್ತಿಗಳಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಇಂತಹ ಪ್ರಕರಣಗಳನ್ನು ಸೂಕ್ತ ಪೀಠದಿಂದ ಪ್ರಕರಣದ ವಿಚಾರಣೆ ನಡೆಯಬೇಕು ಎಂದು ಹೇಳಿದರು.

 

Leave a Comment