ಸುಪ್ರೀಂ ಅತೃಪ್ತ ಶಾಸಕರ ಮೊರೆ : ನಾಳೆ ವಿಚಾರಣೆ, ಐಸಿಯುನಲ್ಲಿ ಸರ್ಕಾರ, ಡಿಕೆಶಿ ಸಂಧಾನ ವಿಫಲ

ಬೆಂಗಳೂರು, ಜು. ೧೦- ತಮ್ಮ ರಾಜೀನಾಮೆ ಪತ್ರಗಳನ್ನು ಅಂಗೀಕರಿಸುವ ವಿಚಾರದಲ್ಲಿ ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್ ಉದ್ದೇಶ ಪೂರಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅತೃಪ್ತ ಶಾಸಕರು, ರಾಜೀನಾಮೆಯನ್ನು ಶೀಘ್ರ ಅಂಗೀಕರಿಸಲು ಸೂಚಿಸುವಂತೆ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದು, ಈ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಾಳೆ ಕೈಗೆತ್ತಿಕೊಳ್ಳಲಿದೆ.

ರಾಜೀನಾಮೆ ಸಲ್ಲಿಸಿರುವ ಕಾಂಗ್ರೆಸ್‌ನ ಹಾಗೂ ಜೆಡಿಎಸ್‌ನ ಅತೃಪ್ತ ಶಾಸಕರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಸುಪ್ರೀಂಕೋರ್ಟ್‌ಗಿಂದು ಅರ್ಜಿ ಸಲ್ಲಿಸಿದ್ದು, ಈ ಕುರಿತು ತುರ್ತು ವಿಚಾರಣೆ ನಡೆಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಈ ಅರ್ಜಿಯನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ನಾಳೆ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಈ ನಡುವೆ ಅಳಿವು-ಉಳಿವಿನ ಹೋರಾಟದಿಂದಾಗಿ ಐಸಿಯು ಸೇರಿದಂತಿರುವ ರಾಜ್ಯದಲ್ಲಿನ ದೋಸ್ತಿ ಸರ್ಕಾರವನ್ನು ಉಳಿಸಿಕೊಳ್ಳಲು ಜೆಡಿಎಸ್-ಕಾಂಗ್ರೆಸ್ ನಾಯಕರು ತಿಪ್ಪರಲಾಗ ಹಾಕುತ್ತಿದ್ದರೆ, ಮುಂಬೈನಲ್ಲಿ ಬೀಡು ಬಿಟ್ಟಿರುವ ಅತೃಪ್ತ ಶಾಸಕರು ಇಂತಹ ಯಾವುದೇ ಪ್ರಯತ್ನಗಳಿಗೆ ಜಗ್ಗದೆ ತಮ್ಮ ತಮ್ಮ ನಿಲುವುಗಳಿಗೆ ಅಂಟಿಕೊಂಡಿರುವುದರಿಂದ ಸರ್ಕಾರ ಯಾವುದೇ ಘಳಿಗೆಯಲ್ಲಿ ಪತನಗೊಳ್ಳುವ ಲಕ್ಷಣಗಳು ಕಂಡು ಬಂದಿದೆ.

ಅತೃಪ್ತ ಜೆಡಿಎಸ್ – ಕಾಂಗ್ರೆಸ್ ಶಾಸಕರ ಮನವೊಲಿಸಿ ಬೆಂಗಳೂರಿಗೆ ವಾಪಸ್ ಕರೆತರುವ ಉದ್ದೇಶದಿಂದ ಅತೃಪ್ತರಿರುವ ಹೋಟೆಲ್‌ಗೆ ಈಗಾಗಲೇ ತಲುಪಿರುವ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರಿಗೆ ಹೋಟೆಲ್ ಪ್ರವೇಶ ನಿರ್ಬಂಧಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ಶಿವಕುಮಾರ್‌ರವರ `ಕೃಷ್ಣ ಸಂಧಾನ’ ಯತ್ನ ಫಲ ನೀಡುವುದೇ ಎಂಬುದು ಯಕ್ಷಪ್ರಶ್ನೆಯಾಗಿ ಉಳಿದಿದೆ.

ಮುಂಬೈನಲ್ಲಿರುವ ಅತೃಪ್ತ ಶಾಸಕರು ತಮ್ಮನ್ನು ನೋಡಲು ಬರುವ ರಾಜ್ಯದ ನಾಯಕರಿಗೆ ಹೋಟೆಲ್ ಪ್ರವೇಶಕ್ಕೆ ಅವಕಾಶ ನೀಡಬಾರದು. ಅವರನ್ನು ಭೇಟಿ ಮಾಡಲು ಸುತಾರಾಂ ಇಷ್ಟವಿಲ್ಲ ಎಂದು ಮುಖಕ್ಕೆ ಹೊಡೆದಂತೆ ಅತೃಪ್ತರು ಹೇಳಿದ್ದಾರೆ. ಅಲ್ಲದೆ ರಾಜ್ಯ ನಾಯಕರು ಇಲ್ಲಿಗೆ ಬಂದರೆ ನಮಗೆ ಬೆದರಿಕೆ ಹಾಕುವ ಸಾಧ್ಯತೆಗಳಿದ್ದು, ಅವರಿಂದ ನಮ್ಮನ್ನು ರಕ್ಷಿಸಬೇಕು. ಹೋಟೆಲ್ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಈ ಶಾಸಕರು ಮುಂಬೈ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಅತೃಪ್ತರ ಈ ನಡೆ `ಸಂಧಾನ’ದ ಬಾಗಿಲು ಬಂದ್ ಮಾಡಿದಂತಾಗಿದ್ದು, ಸರ್ಕಾರ ಮರುಜೀವ ಪಡೆಯುವ ಲಕ್ಷಣಗಳೇ ಕಂಡು ಬರುತ್ತಿಲ್ಲ. ಸರ್ಕಾರದ ಪತನ ಶತ ಸಿದ್ಧ ಎಂದು ಹೇಳಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

ಮೊನ್ನೆಯಿಂದ ಅತೃಪ್ತರು ಮುಂಬೈನಲ್ಲಿ ಬೀಡುಬಿಟ್ಟಿದ್ದು, ರಾಜ್ಯದಲ್ಲಿನ ದೋಸ್ತಿ ನಾಯಕರ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಆಗಿಂದಾಗ್ಗೆ ತಮ್ಮ ನೆಚ್ಚಿನ ಸಿಎಲ್‌ಪಿ ನಾಯಕರಾದ ಸಿದ್ದರಾಮಯ್ಯ ಅವರಿಗೂ ಟಾಂಗ್ ನೀಡಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೂ ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ನಮ್ಮ ಮಾತಿಗೆ ಬೆಲೆ ಕೊಡದ ಕುಮಾರಸ್ವಾಮಿ, ಈಗ ಏನೇ ಹೇಳಿದರೂ ಒಪ್ಪುವ ಸ್ಥಿತಿಯಲ್ಲಿಲ್ಲ. ಸರ್ಕಾರದ ಸಹವಾಸವೇ ಬೇಡ, ನಮ್ಮ ದಾರಿ ನಮಗೆ ಎಂದು ಕಡ್ಡಿ ಮುರಿದಂತೆ ಪದೇ ಪದೇ ಹೇಳಿದ್ದಾರೆ.

ರಾಜೀನಾಮೆ ಕೊಟ್ಟಿರುವ 13 ಶಾಸಕರ ಪೈಕಿ 9 ಶಾಸಕರ ನಾಮಪತ್ರಗಳು ಕ್ರಮಬದ್ಧವಾಗಿಲ್ಲ. ಉಳಿದ 5 ಶಾಸಕರ ನಾಮಪತ್ರಗಳು ಕ್ರಮಬದ್ಧವಾಗಿದ್ದು, ರಾಜೀನಾಮೆಗೆ ಸೂಕ್ತ ವಿವರಣೆ ನೀಡಬೇಕೆಂದು ನೋಟಿಸ್ ಜಾರಿ ಮಾಡಿರುವ ವಿಧಾನಸಭಾಧ್ಯಕ್ಷ ಅವರ ನಡೆಯಿಂದ ಸರ್ಕಾರಕ್ಕೆ ಇನ್ನೂ ಕುಟುಕು ಜೀವ ಉಳಿಯುವಂತಾಗಿದೆ.

ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ನಿನ್ನೆ ಮುಂಬೈಗೆ ತೆರಳಿ ಅತೃಪ್ತರನ್ನು ಭೇಟಿ ಮಾಡಿ ಅವರಿಂದ ನಿಗದಿತ ನಮೂನೆ(ಫಾರ್ಮ್ಯಾಟ್)ಯನ್ವಯ ರಾಜೀನಾಮೆ ಪತ್ರಗಳನ್ನು ಪಡೆದು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಇಂದು ರಾಜೀನಾಮೆ ಪತ್ರಗಳನ್ನು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್‌ರವರಿಗೆ ಸಲ್ಲಿಸಿ ಅಂಗೀಕರಿಸುವಂತೆ ಒತ್ತಡ ಹೇರಲಿದ್ದಾರೆ.

ಸರ್ಕಾರ ಬಹುಮತ ಕಳೆದುಕೊಂಡಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿರುವ ಬಿಜೆಪಿ ನಾಯಕರು ಸರ್ಕಾರವನ್ನು ಪತನಗೊಳಿಸಲು ತಮ್ಮ ಬತ್ತಳಿಕೆಯಲ್ಲಿರುವ ಎಲ್ಲ ಬಗೆಯ `ಬ್ರಹ್ಮಾಸ್ತ್ರ’ಗಳನ್ನು ಪ್ರಯೋಗಿಸಲಾರಂಭಿಸಿದ್ದಾರೆ.

ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷದ ಶಾಸಕರು ವಿಧಾನಸೌಧ ಮತ್ತು ವಿಕಾಸಸೌಧ ನಡುವೆ ಇರುವ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುತ್ತಿದ್ದಾರೆ.

ರಾಜ್ಯಪಾಲ ವಜುಭಾಯಿವಾಲಾ ಅವರನ್ನು ಭೇಟಿ ಮಾಡಿ ಕುಮಾರಸ್ವಾಮಿ ಸರ್ಕಾರ ಬಹುಮತ ಕಳೆದುಕೊಂಡಿದ್ದು, ವಿಧಾನಸಭೆಯಲ್ಲಿ ತಮಗಿರುವ ಬಹುಮತ ಸಾಬೀತುಪಡಿಸಲು ಸೂಚಿಸುವಂತೆ ಒತ್ತಡ ಹೇರಲು ಮುಂದಾಗಿದ್ದಾರೆ.
ಅತೃಪ್ತ ಶಾಸಕರ ರಾಜೀನಾಮೆ ಪತ್ರಗಳನ್ನು ಕೂಡಲೇ ಅಂಗೀಕರಿಸುವಂತೆ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರನ್ನೂ ಭೇಟಿ ಮಾಡಿ ಒತ್ತಡ ತಂತ್ರಗಳನ್ನು ಹೇರಲಿದ್ದಾರೆ.

Leave a Comment