ಸುಪ್ರೀಂಕೋರ್ಟ್‌ಗೆ ಹೋಗಿರುವುದನ್ನು ಸ್ಪೀಕರ್ ಪ್ರಶ್ನಿಸಿರುವುದು ಸರಿಯಲ್ಲ: ಆರ್. ಅಶೋಕ್

 
ಬೆಂಗಳೂರು, ಜು 12 – ಸರ್ಕಾರದ ಸೋಮವಾರ ಕಾರ್ಯಸೂಚಿ ನೋಡಿಕೊಂಡು ನಮ್ಮ ಮುಂದಿನ ನಡೆಯನ್ನು ನಿರ್ಧರಿಸುತ್ತೇವೆ ಎಂದು ಬಿಜೆಪಿ ಶಾಸಕ ಆರ್ ಅಶೋಕ್ ಹೇಳಿದ್ದಾರೆ.

ಮುಖ್ಯಮಂತ್ರಿ ಹೇಳಿಕೆ ಗಮನಿಸಿದ್ದೇನೆ, ಅಗತ್ಯ ಬಿದ್ದರೆ ಸದನದಲ್ಲಿ ವಿಶ್ವಾಸಮತ ಯಾಚಿಸಲು ಸಿದ್ಧ ಇದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅವರು ಹೇಳಿರುವುದು ಸರಿ ಇಲ್ಲ. ಇದೇ ಸೋಮವಾರವೇ ವಿಶ್ವಾಸಮತ ಯಾಚಿಸಲು ಸಿದ್ಧನಿದ್ದೇನೆ ಎಂದು ಹೇಳಿಲ್ಲ. ಅವರಿಗೆ ಅಷ್ಟು ಧೈರ್ಯ ಇದ್ದಿದ್ದರೆ ಇವತ್ತೇ ವಿಶ್ವಾಸಮತ ಯಾಚಿಸಲು ಅವಕಾಶ ಮಾಡಿಕೊಡಿ ಎಂದು ಕೇಳಬೇಕಿತ್ತು. ಈ ಸರ್ಕಾರಕ್ಕೆ ಬಹುಮತವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ವಾಗ್ದಾಳಿ ನಡೆಸಿದರು.

ನಿಮ್ಮ ಶಾಸಕರನ್ನು ಕರೆದು ಒಂದು ಸಭೆ ನಡೆಸಿ, ಆಗ ನಿಮ್ಮ ಒಗ್ಗಟ್ಟು ನಾವು ನೋಡುತ್ತೇವೆ, ಅಮೇಲೆ ನಿಮ್ಮ ಬಹುಮತವನ್ನು ಯಾಚನೆ ಮಾಡಿ ಎಂದು ಆರ್ ಅಶೋಕ್ ಸವಾಲು ಹಾಕಿದರು.

ಅತೃಪ್ತ ಶಾಸಕರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿ ಇಂದು ಸುಪ್ರೀಂ ಕೋರ್ಟ್, ಯಥಾಸ್ಥಿತಿ ಕಾಪಾಡುವಂತೆ ಸ್ಪೀಕರ್‌ ಅವರಿಗೆ ಸೂಚಿಸಿದೆ. ಇದನ್ನೇ ಮುಖ್ಯಮಂತ್ರಿಯವರು ನಿರಾಳ ಎಂದು ಭಾವಿಸಿದ್ದಾರೆ, ಸುಪ್ರೀಂ ಕೋರ್ಟ್ ಗೆ ಸ್ಪೀಕರ್ ಗೆ ಹೇಳುವ ಅಧಿಕಾರ ಇದೆ. ಅದನ್ನು ಸುಪ್ರೀಂ ಕೋರ್ಟ್ ಮಾಡಿದೆ, ಸುಪ್ರೀಂ ಕೋರ್ಟ್ ಗೆ ಯಾರು ಬೇಕಾದರೂ ಹೋಗಬಹುದು, ಸುಪ್ರೀಂ ಕೋರ್ಟ್ ಗೆ ಯಾಕೆ ಹೋದಿರಿ ಎಂದು ಶಾಸಕರನ್ನು ಸ್ಪೀಕರ್ ಪ್ರಶ್ನಿಸಿದ್ದಾರೆಂದು ತಿಳಿದುಬಂದಿದೆ. ಇದು ಒಂದು ರೀತಿಯಲ್ಲಿ ಬೆದರಿಕೆ ಹಾಕಿದಂತೆ ಎಂದು ಅಶೋಕ್ ವ್ಯಾಖ್ಯಾನಿಸಿದರು.

Leave a Comment