ಸುಪ್ರಭಾ-ಕೀರ್ತನಾ ಮನೋಹರ ನರ್ತನ

ವೇದಿಕೆಯ ಮೇಲೆ ಪುಟ್ಟ ಸುಂದರಜೋಡಿಯೊಂದು ಮಿಂಚಿನ ಸಂಚಾರದಲ್ಲಿ ನರ್ತಿಸುತ್ತಿತ್ತು. ವಯಸ್ಸಿಗೆ ಮೀರಿದ ನೃತ್ಯಪ್ರತಿಭೆಗಳು. ಅವರೇ ಆರ್.ಸುಪ್ರಭಾ ಮತ್ತು ಎಂ. ಕೀರ್ತನಾ. ಸಹಕಾರನಗರದ ವಿವೇಕಾನಂದ ಅರ್ಚಿಡ್ಸ್ ಶಾಲೆಯ ಆವರಣದಲ್ಲಿ ಸಾಂಸ್ಕೃತಿಕ ಸಂಜೆಯ ಮುದವಾದ ವಾತಾವರಣ. ಕಿಕ್ಕಿರಿದ ಕಲಾರಸಿಕರು. ‘ನೃತ್ಯೋಮಾ ಡಾನ್ಸ್ ಅಕಾಡೆಮಿ’ ಯ ನುರಿತ ನಾಟ್ಯಗುರು ವಿದುಷಿ ರಾಧಿಕಾ ಎಂ.ಕೆ. ಸ್ವಾಮಿ ಅವರ ಮಾರ್ಗದರ್ಶನದಲ್ಲಿ ರೂಪುಗೊಂಡ ಬಾಲ ಕಲಾವಿದೆಯರಿವರು. ರಂಗಾಭಿವಂದನೆಯ ‘ಗೆಜ್ಜೆಪೂಜೆ’ ಕಾರ್ಯಕ್ರಮದಲ್ಲಿ ಈ ಯುಗಳ ಕಲಾವಿದೆಯರು ಅಚ್ಚುಕಟ್ಟಾಗಿ ನರ್ತಿಸಿದ್ದು ವಿಶೇಷ. ಅವಳಿ-ಜವಳಿಗಳಂತಿದ್ದ ಇಬ್ಬರ ಮೊಗಗಳಲ್ಲೂ ಆತ್ಮವಿಶ್ವಾಸ ಪ್ರಕಾಶಿಸುತ್ತಿತ್ತು. ನಗುಮುಖದ ಪ್ರಸ್ತುತಿ ಮನಸ್ಸನ್ನು ತುಂಬಿತು.

ಶುಭಾರಂಭಕ್ಕೆ ರಾಜ್ ಕುಮಾರ್ ಭಾರತಿ ರಚನೆ, ನಾಟ ರಾಗದ ‘ಪುಷ್ಪಾಂಜಲಿ’ಯಲ್ಲಿ ತಮ್ಮ ಖಚಿತಹಸ್ತ ಮತ್ತು ಅಡವುಗಳಿಂದ ‘ಪಂದನಲ್ಲೂರು’ಶೈಲಿಯ ಭರತನಾಟ್ಯವನ್ನು ಪ್ರದರ್ಶಿಸಿದರು. ಬಾಲಕಲಾವಿದೆಯರು ಸಲೀಸಾಗಿ ಆಕಾಶಚಾರಿ, ಅರೆಮಂಡಿಯ ಅಡವುಗಳೊಂದಿಗೆ ಆಕರ್ಷಕ ವಿನ್ಯಾಸದ ಭಂಗಿಗಳನ್ನು ತೋರಿದರು. ಅವರೀರ್ವರ ನಡುವಿನ ಸಾಮರಸ್ಯ ಗಮನಾರ್ಹವಾಗಿ ಎದ್ದುಕಂಡಿತು. ಮುಂದೆ ಶುದ್ಧ ಧನ್ಯಾಸಿ ರಾಗ-ಆದಿತಾಳದ ಬಿ.ಗುರುಮೂರ್ತಿ ರಚನೆಯ ‘ಪ್ರಣವನಾಯಕ ಸಿದ್ಧಿವಿನಾಯಕ’ ಎಂಬುದಾಗಿ ಭಕ್ತಿ-ತಾದಾತ್ಮ್ಯತೆಯಿಂದ ‘ ಗಣೇಶವಂದನೆ’ ಸಲ್ಲಿಸಿದರು. ಕಡೆಯ ಭಂಗಿಯಲ್ಲಿ ರಚಿಸಿದ ವಿನ್ಯಾಸ ಮನಸೆಳೆಯುವಂತಿತ್ತು.

‘ನರಸಿಂಹ ಕೌತ್ವಂ’ ಅಭಿನಯದಲ್ಲಿ ಯಮಳರು ಸೊಗಸಾದ ಅಭಿನಯ ಅಭಿವ್ಯಕ್ತಿಸಿದರು. ಶಾಪಗ್ರಸ್ತ ಜಯ-ವಿಜಯರು, ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರಾಗಿ ಹುಟ್ಟಿ ಲೋಕಕಂಟಕ ಕಾರ್ಯಗಳಿಂದ , ಶ್ರೀಹರಿಯ ವರಾಹ ಮತ್ತು ನಾರಸಿಂಹ ಅವತಾರಗಳಲ್ಲಿ ಸಂಹಾರವಾದ ಕಥೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಪ್ರಾರಂಭದ ಲಕ್ಷ್ಮೀ ನರಸಿಂಹನ ಕೃಪೆಯನ್ನು ಬೇಡುವ ಶ್ಲೋಕವನ್ನು ಅರ್ಥಪೂರ್ಣವಾಗಿ ನಿರೂಪಿಸಿದರು. ಉಗ್ರ ನರಸಿಂಹನ ಚಿತ್ರಣವನ್ನು ಕಡೆದಿರಿಸುವಂಥ ಪೌರುಷ-ವೀರಾವೇಶದ ಹೆಜ್ಜೆಗಳು, ಕ್ರೋಧಾಗ್ನಿಯ ರೌದ್ರ ರಸವುಕ್ಕಿಸುವಂಥ ನೃತ್ತ ಝೇಂಕಾರ ಅಭಿವ್ಯಕ್ತವಾಯಿತು. ಜ್ವಾಲಾಮಾಲಿನಿಯ ಅಭಿನಯ ತೇಜಸ್ಸಿನಿಂದ ಕೂಡಿತ್ತು. ಹಾಗೆಯೇ ಭೈರವರೂಪಿ ಹಿರಣ್ಯಕಶಿಪುವಿನ ವ್ಯಕ್ತಿತ್ವವನ್ನೂ ಅಷ್ಟೇ ಗಾಢವಾಗಿ ಕಟ್ಟಿಕೊಟ್ಟರು. ನರಸಿಂಹ, ಹಿರಣ್ಯಕಶಿಪುವಿನ ಕರುಳು ಬಗೆವ ದೃಶ್ಯ ಪರಿಣಾಮಕಾರಿಯಾಗಿ ಮೂಡಿಬಂತು.

ಲೋಕಕಲ್ಯಾಣಾರ್ಥವಾಗಿ ಚಾಮುಂಡೇಶ್ವರಿ ಅವತಾರವೆತ್ತಿದ ಪ್ರಕರಣ ರುದ್ರ ರಮಣೀಯವಾಗಿತ್ತು. ಮುತ್ತಯ್ಯ ಭಾಗವತರು ರಚಿಸಿದ ಕೃತಿ ದೈವೀಕವಾಗಿ ಸಾಕಾರವಾಯಿತು. ‘ಅಳಗಿರಿ ನಂದಿನಿ …’ ಯ ಝೇಂಕಾರಕ್ಕೆ ತಕ್ಕಂತೆ ಸುಪ್ರಭಾ ಹೆಜ್ಜೆ ಹಾಕಿದಳು. ಭರ್ಜಿ ಹಿಡಿದು ಭಯಂಕರವಾಗಿ ಆರ್ಭಟಿಸಿದ ಮಹಿಷಾಸುರಮರ್ಧಿನಿಯ ಅಭಿನಯ ಮನೋಹರತೆಯಿಂದ ಕೂಡಿತ್ತು. ರೋಷಾವಿಷ್ಟದ ಅನೇಕ ಸುಂದರಭಂಗಿಗಳು ಗಮನೀಯವಾದವು.

ಶ್ರೀವಾದಿರಾಜ ಕೃತ ‘ಕುಣಿದಾಡೋ ರಂಗ ನಲಿದಾಡೋ ‘ ಕರ್ಣರಂಜಿನಿ ರಾಗದ ಕೀರ್ತನೆಯನ್ನು ಕೀರ್ತನಾ, ಬಹು ಲವಲವಿಕೆಯಿಂದ ಆಹ್ಲಾದಕರ ಅಭಿನಯದೊಂದಿಗೆ  ಪ್ರಸ್ತುತಪಡಿಸಿದಳು. ಕಾಳಿಂಗನ ಫಣೆಯಲಿ ನರ್ತನವಾಡಿದ ಕಲಾವಿದೆಯ ಆನಂದದ ತನ್ಮಯ ನರ್ತನ, ಭಂಗಿಗಳ ರಚನೆಯಲ್ಲಿ ದೇಹದ ಮೇಲಿದ್ದ ಅವಳ ನಿಯಂತ್ರಣ ಮೆಚ್ಚುಗೆ ತಂದಿತ್ತು.  ಕಡೆಯಲ್ಲಿ ಪ್ರಸ್ತುತಗೊಂಡ ವಲಚಿ ರಾಗದ ‘ತಿಲ್ಲಾನ’ ಸಂಕೀರ್ಣ ಜತಿಗಳು, ಮನೋಹರ ಮುಕ್ತಾಯಗಳು, ರಂಗಾಕ್ರಮಣದಿಂದ ಸುಮನೋಹರವಾಗಿ ಸಂಪನ್ನಗೊಂಡಿತು.

  • ವೈ.ಕೆ.ಸಂಧ್ಯಾ ಶರ್ಮ

Leave a Comment