ಸುಧೀರ್ಘ 18 ಗಂಟೆಗಳ ಭವ್ಯ ಮೆರವಣಿಗೆ

ವಿಘ್ನೇಶ್ವರನಿಗೆ ಸಾಮೂಹಿಕ ವಿದಾಯ
* ಭಾರೀ ಗಾತ್ರದ ಗಜಾನನ ವೀಕ್ಷಣೆಗೆ ಜನ ಸಾಗರ
ರಾಯಚೂರು.ಸೆ.12- ಗಣೇಶೋತ್ಸವ 9 ದಿನಗಳ ನಂತರ ಸೆ. 10 ರಂದು ರಾತ್ರಿ ಅತ್ಯಂತ ಅದ್ಧೂರಿಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾದ 114 ಗಣೇಶ ಬೃಹತ್ ಮೂರ್ತಿಗಳನ್ನು ನಗರದ ಖಾಸಬಾವಿಯಲ್ಲಿ ನಿಮಜ್ಜಿಸಲಾಯಿತು.
ಭೀಕರ ಬರ, ನೆರೆ ಮಧ್ಯೆಯೂ ಬೃಹತ್ತಾಕಾರದ ಗಣೇಶ ಮೂರ್ತಿಗಳನ್ನು ವಾದ್ಯ ಮತ್ತು ಡಿಜೆ ಮೂಲಕ ಮೆರವಣಿಗೆಯೊಂದಿಗೆ ವಿಸರ್ಜಿಸಲಾಯಿತು. ಚಂದ್ರಮೌಳೇಶ್ವರ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ನೇತಾಜಿ ನಗರ ವೃತ್ತ, ಸರಾಫ್ ಬಜಾರ್, ಕಿರಣ್ ಬಜಾರ್, ತೀನ್ ಖಂದೀಲ್ ಮೂಲಕ ಖಾಸಬಾವಿಯತ್ತ ತೆರಳಿದವು.
ಭಾರೀ ಜನ ಸಮೂಹ ಒಂದೆಡೆಯಾದರೇ, ಗಜಾನನ ಸಮಿತಿಗಳ ಕುಣಿತದ ಹಿನ್ನೆಲೆಯಲ್ಲಿ ಮೆರವಣಿಗೆ ಅತ್ಯಂತ ಸಾವಧಾನವಾಗಿ ನಡೆದಿದ್ದರಿಂದ ಎಲ್ಲಾ ಗಣೇಶ ಮೂರ್ತಿ ವಿಸರ್ಜನೆ ಸುಮಾರು 18 ರಿಂದ 20 ಗಂಟೆಗಳ ಅವಧಿ ಬೇಕಾಯಿತು. ಅಹೋರಾತ್ರಿ ವಿಸರ್ಜನಾ ಮೆರವಣಿಗೆ ಅತ್ಯಂತ ಶಾಂತಿ ಸುವ್ಯವಸ್ಥೆಯೊಂದಿಗೆ ನಿರ್ವಹಿಸಲಾಯಿತು. ಭಾರೀ ಪೊಲೀಸ್ ಬಂದೋಬಸ್ತ್‌ನಲ್ಲಿ ಈ ಮೆರವಣಿಗೆ ಕೈಗೊಳ್ಳಲಾಯಿತು.
ಚಂದ್ರಮೌಳೇಶ್ವರ ವೃತ್ತ ಗಣೇಶ ಉತ್ಸವ ಸಮಿತಿ ಮುಖಂಡರಿಗೆ ಗೌರವಿಸುವ ಮೂಲಕ ಮೆರವಣಿಗೆಯನ್ನು ಮುಂದೆ ಸಾಗುವಂತೆ ಮಾಡಲಾಗುತ್ತಿತ್ತು. ಈ ಸಲ ಭಾರೀ ಗಾತ್ರದ ಗಣೇಶ ಮೂರ್ತಿ ಹಿನ್ನೆಲೆಯಲ್ಲಿ ವಿದ್ಯುತ್ ಸ್ಪರ್ಶ ಸೇರಿದಂತೆ ಇನ್ನಿತರ ಅವಘಡಗಳಿಗೆ ಅವಕಾಶವಿಲ್ಲದಂತೆ ವಿಶೇಷ ಕಾಳಜಿ ವಹಿಸಲಾಗಿತ್ತು. ಪ್ರತಿ ವೃತ್ತದಲ್ಲೂ ಕೆಲ ಸ್ವಯಂ ಸೇವಕರು ಗಣೇಶ ಮೆರವಣಿಗೆಯ ಭಕ್ತರಿಗಾಗಿ ನೀರು ಮತ್ತಿತರ ಸೌಕರ್ಯ ಒದಗಿಸುವ ಮೂಲಕ ವಿಸರ್ಜನಾ ಪ್ರಕ್ರಿಯೆ ಅತ್ಯಂತ ವಿಜೃಂಭಣೆಯಿಂದ ನಡೆಸಲಾಯಿತು.
ಮೆರವಣಿಗೆಯಲ್ಲಿ ಡಿಜೆ ನಿಷೇಧವಿದ್ದರೂ, ಗಜಾನನ ಸಮಿತಿಗಳು ಮಾತ್ರ ಇದ್ಯಾವುದನ್ನೂ ಲೆಕ್ಕಿಸದೇ, ನಿರ್ದಿಷ್ಟ ಡೆಸೆಮಲ್‌ಗಿಂತ ಅಧಿಕ ಧ್ವನಿಯ ಡಿಜೆ ಬಳಸಿದರು. ಭಾರೀ ಸದ್ದಿನಲ್ಲಿ ಹೆಜ್ಜೆ ಹಾಕುವ ಉತ್ಸಾಹಕ್ಕೆ ಯಾವುದೇ ಭಂಗ ಬಾರದಂತೆ ತಾಳ್ಮೆಸಹ ಮೆರವಣಿಗೆಯನ್ನು ಬೆಂಬಲಿಸಿದರು. ಇಂದು ಮಧ್ಯಾಹ್ನ 1 ಗಂಟೆವರೆಗೂ ವಿಸರ್ಜನೆ ಪ್ರಕ್ರಿಯೆ ನಡೆದಿತ್ತು. 114 ಗಣೇಶ ಮೂರ್ತಿ ವಿಸರ್ಜನೆ 1 ಗಂಟೆವರೆಗೂ ಸುಮಾರು 75 ಮೂರ್ತಿಗಳನ್ನು ನಿಮಜ್ಜನ ಮಾಡಲಾಗಿತ್ತು.
ಖಾಸಬಾವಿ ಬಳಿ ನಿಮಜ್ಜನಕ್ಕಾಗಿ ವಿಶೇಷ ಅನುಕೂಲ ಮಾ‌ಡಿಕೊಡಲಾಗಿತ್ತು. ಭಾರೀ ಗಾತ್ರದ ಎರಡು ಕ್ರೇನ್, ಜೆಸಿಬಿಯೊಂದಿಗೆ ವಿಸರ್ಜನಾ ಪ್ರಕ್ರಿಯೆಗೆ ಅಗತ್ಯವಾದ ಎಲ್ಲಾ ವ್ಯವಸ್ಥೆ ಕೈಗೊಳ್ಳಲಾಗಿತ್ತು. ರಾತ್ರಿಯಿಡೀ ಪೊಲೀಸ್ ಗಸ್ತಿನಲ್ಲಿ ಮೆರವಣಿಗೆ ಅಚ್ಚುಕಟ್ಟಾಗಿ ನಡೆಯಿತು. ಭಾರೀ ಜನಸ್ತೋಮ ಸೇರಿದ್ದರು. ಯಾವುದೇ ಅಹಿತಕರ ನಡೆಯದಂತೆ ಮೆರವಣಿಗೆ ಯಶಸ್ವಿಯಾಗಿ ನಿರ್ವಹಿಸಲಾಯಿತು. ಮೊಹರಂ, ಗಣೇಶ ಹಬ್ಬ ತಮ್ಮದೇಯಾದ ಧಾರ್ಮಿಕ ವಿಧಿವಿಧಾನದೊಂದಿಗೆ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಮಾಡುವಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಪಾತ್ರ ವಿಶೇಷವಾಗಿತ್ತು.

Leave a Comment