ಸುಡುಬಿಸಿಲು ಲೆಕ್ಕಿಸದೇ ಪಡಿತರ ಪಡೆದ ಕಡುಬಡವರು

ನವಲಗುಂದ,ಏ.6- ಸತತ ಹನ್ನೇರಡು ದಿನದಿಂದ ಲಾಕ್‍ಡೌನ್‍ನಿಂದಾಗಿ ಕಡುಬಡವರಿಗೆ ದುಡಿಮೆ ಇಲ್ಲ. ಕೈಯಲ್ಲಿ ಕಾಸು ಇಲ್ಲದೇ ಪರದಾಡುತ್ತಿದ್ದ ಜನರು ಪಡಿತರಕ್ಕಾಗಿ ಸುಡುಬಿಸಿಲಿನಿಲ್ಲಿಯೇ ಸರದಿ ಸಾಲಿನಲ್ಲಿ ನಿಂತು ಎರಡು ತಿಂಗಳ ಪಡಿತರ ಪಡೆದುಕೊಂಡು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವುದು ಭಾನುವಾರ ಕಂಡುಬಂತು.
ಎರಡು ತಿಂಗಳ ರೇಷನ್ ಒಟ್ಟಿಗೆ ಕೊಡುತ್ತಿರುವುದನ್ನು ತಿಳಿದ ಪಡಿತರದಾರರು ಒಮ್ಮಿಂದಲೇ ನೂರಾರು ಸಂಖ್ಯೆಯಲ್ಲಿ ಆಗಮಿಸಿ ಪಡಿತರ ಪಡೆದುಕೊಳ್ಳಲು ಮುಗಿಬಿದ್ದರು. ಪೊಲೀಸರು ಸರದಿ ಸಾಲಿನಲ್ಲಿ ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಪಡೆದುಕೊಳ್ಳುವಂತೆ ಮೇಲಿಂದ ಮೇಲೆ ಎಚ್ಚರಿಸಿದರೂ ಎಲ್ಲಿ ಪಡಿತರ ಸಿಗುತ್ತದೆಯೋ ಇಲ್ಲವೊ ಎಂಬ ಆತಂಕದಿಂದ ಗುಂಪು ಗುಂಪಾಗಿ ಪಡಿತರ ಪಡೆದುಕೊಳ್ಳಲು ಮುಂದಾದರು. ಇದರಿಂದಾಗಿ ನೂಕುನುಗ್ಗಲು ಉಂಟಾಗಿ ಪಡಿತರ ವಿತರಣೆ ಮಾಡುವವರಿಗೂ ತೊಂದರೆಯಾಗಿದ್ದರಿಂದ  ಸಿಟ್ಟಾದ ಸಿ.ಪಿ.ಐ ಮಠಪತಿ ಹಾಗೂ ಪಿ.ಎಸ್.ಐ ಜಯಪಾಲ ಪಾಟೀಲ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಸುಡುಬಿಸಿಲಿನಲ್ಲಿಯೇ ಪಡಿತರ ಪಡೆದುಕೊಳ್ಳಬೇಕಾಯಿತು.
ಕೊರೊನಾ ಲಾಕ್‍ಡೌನ್ ಹಿನ್ನಲೆಯಲ್ಲಿ ಕಡುಬಡವರಿಗೆ ಊಟಕ್ಕೆ ತೊಂದರೆಯಾಗಬಾರದೆಂದು ಸರ್ಕಾರ ಎರಡು ತಿಂಗಳ ಪಡಿತರ ಒಟ್ಟಿಗೆ ಪೂರೈಸುತ್ತಿದೆ. ಬಿ.ಪಿ.ಎಲ್ ಕಾರ್ಡ ಹೊಂದಿರುವ ಪ್ರತಿ ವ್ಯಕ್ತಿಗೆ 10 ಕೆ.ಜಿ.ಅಕ್ಕಿ ಹಾಗೂ ಕಾರ್ಡ್ ಒಂದಕ್ಕೆ ಎಷ್ಟೇ ಜನರಿದ್ದರೂ 2 ಕೆ.ಜಿ ಗೋದಿ ವಿತರಣೆ ಮಾಡಲಾಗುತ್ತಿದೆ. ಅಂತ್ಯೋದಯ ಕಾರ್ಡದಾರರಿಗೆ 70 ಕೆ.ಜಿ.ಅಕ್ಕಿ ವಿತರಣೆ ಮಾಡಲಾಗುತ್ತಿದೆ.
ಒಟ್ಟಿಗೆ ಎರಡು ತಿಂಗಳ ಪಡಿತರ ಪಡೆದುಕೊಂಡ ಪರೀದಾಬೇಗಂ ಅವರನ್ನು ವಿಚಾರಿಸಿದಾಗ ಲಾಕಡೌನ್ ಸಹಾಯಕ್ಕಾಗಿ ಸರಕಾರ ನಮಗೇನು ಹೆಚ್ಚಿಗೆ ಕೊಟ್ಟಿಲ್ಲ. ಎರಡು ತಿಂಗಳ ಪಡಿತರವನ್ನು ಮುಂಗಡವಾಗಿ ಕೊಟ್ಟಿದ್ದಾರಷ್ಟೇ. ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ 7 ಕೆ.ಜಿ ಅಕ್ಕಿ ವಿತರಿಸುತ್ತಿದ್ದರು. ಆದರೆ ಈ ತಿಂಗಳು ಪ್ರತಿ ವ್ಯಕ್ತಿಗೆ 5 ಕೆ.ಜಿ. ಕೊಡುತ್ತಿದ್ದಾರೆ. ಕಡತ ಮಾಡಿದ 2 ಕೆ.ಜಿ ಅಕ್ಕಿಯ ಬದಲಾಗಿ 2 ಕೆ.ಜಿ ಗೋದಿ ವಿತರಣೆ ಮಾಡುತ್ತಿದ್ದಾರಷ್ಟೇ ಎಂದು ಉತ್ತರಿಸಿದರು.
ಈ ಸಮಸ್ಯೆ ಕುರಿತು ತಹಶೀಲ್ದಾರ್ ನವೀನ ಹುಲ್ಲೂರ ಅವರನ್ನು ವಿಚಾರಿಸಿದಾಗ ಎಪ್ರೀಲ್ ಹಾಗೂ ಮೇ ತಿಂಗಳ ಪಡಿತರವನ್ನು ಒಟ್ಟಿಗೆ ಕೊಡಲಾಗುತ್ತಿದೆ. ಪ್ರತಿ ಕಾರ್ಡದಾರರಿಗೂ ಟೊಕನ್ ಕೊಡಲಾಗುತ್ತಿದೆ. ಟೊಕನ್‍ನಲ್ಲಿ ನಾವು ನಿಗದಿಪಡಿಸಿದ ದಿನಾಂಕದಂದು ಬಂದು ಸರದಿ ಸಾಲಿನಲ್ಲಿ ನಿಂತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಾಕಷ್ಟು ಜಾಗೃತಿ ಮೂಡಿಸಿದ್ದೇವೆ. ಆದರೂ ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಪಡಿತರ ಕೊಡುವುದನ್ನು ಬಂದ್ ಮಾಡುವ ದಿನಾಂಕವನ್ನು ನಾವು ಪ್ರಕಟಿಸಿಲ್ಲ. ಪ್ರತಿಯೊಬ್ಬ ಬಿ.ಪಿ.ಎಲ್ ಕಾರ್ಡದಾರರಿಗೂ ಪಡಿತರ ಮುಟ್ಟುವವರೆಗೂ ಕೊಡುತ್ತೇವೆ. ಇದರಲ್ಲಿ ಯಾವುದೇ ಸಂಶಯ ಬೇಡ.   ಜನರು ದಯವಿಟ್ಟು ಅರ್ಥಮಾಡಿಕೊಂಡು ನಾವು ಕೊಟ್ಟ ಟೊಕನ್ ದಿನಾಂಕದಂದು ಆಗಮಿಸಿ ಪಡಿತರ ಪಡೆದುಕೊಳ್ಳುವಂತೆ ವಿನಂತಿಸಿದ್ದಾರೆ.
ಲಾಕ್‍ಡೌನ್ ಇರುವುದರಿಂದ  ಎರಡು ದಿನ ಮಾತ್ರ ಪಡಿತರ ಕೊಡುತ್ತಾರೆಂದು ಸುಳ್ಳು ಸುದ್ದಿಯಿಂದಾಗಿ ಬಹುತೇಕ ಪಡಿತರದಾರರು ತಂಡೋಪ ತಂಡವಾಗಿ ನೂರಾರು ಸಂಖ್ಯೆಯಲ್ಲಿ ಬಂದಿದ್ದರಿಂದ ಪಡಿತರ ವಿತರಣೆಯಲ್ಲಿಯೂ ತೊಂದರೆಯಾಯಿತು.
ನವಲಗುಂದದಲ್ಲಿ ಪಡಿತರದಾರರು ಸುಡುಬಿಸಿಲಿನಲ್ಲಿ ನಿಲ್ಲಲಾಗದೇ ತಾವು ತಂದ ಚೀಲಗಳನ್ನೇ ಪೊಲೀಸರು ಹಾಕಿದ ಚೌಕಗಳಲ್ಲಿ ಸರದಿಗಾಗಿ ಮಹಿಳೆಯೊಬ್ಬಳು ಇಡುತ್ತಿರುವುದು.

Leave a Comment