ಸುಗಮ ಸಂಗೀತದಲ್ಲಿ ಬದುಕಿಗೆ ಅಗತ್ಯವಿರುವ ಸಾಹಿತ್ಯ ಅಡಗಿದೆ

ಚಾಮರಾಜನಗರ ಸೆ.11- ಗಡಿಜಿಲ್ಲೆಯಲ್ಲಿ ಸಂಗೀತ ಹಾಸುಹೊಕ್ಕಾಗಿದೆ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯದ ಪ್ರಾದೇಶಿಕ ಕೇಂದ್ರವನ್ನು ಚಾಮರಾಜನಗರದಲ್ಲಿ ತೆರೆಯಬೇಕು ಎಂದು ಬೆಂಗಳೂರಿನ ಹೊಂಬಾಳೆ ಪ್ರತಿಭಾರಂಗದ ಅಧ್ಯಕ್ಷ ಹಾಗೂ ಸುಗಮ ಸಂಗೀತ ಗಾಯಕ ಹೆಚ್.ಫಲ್ಗುಣ ಹೇಳಿದರು.
ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಸುಗಮ ಸಂಗೀತ ತರಬೇತಿ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದ ಅವರು, ಸುಗಮ ಸಂಗೀತದಲ್ಲಿ ಬದುಕಿಗೆ ಅಗತ್ಯ ವಿರುವ ಸಾಹಿತ್ಯ ಅಡಗಿದೆ. ವ್ಯಕ್ತಿಯು ತನ್ನ ಭಾವನೆಗಳನ್ನು ವ್ಯಕ್ತ ಪಡಿಸುವ ಪ್ರತಿಯೊಂದು ಗೀತೆಯು ಭಾವಗೀತೆಯಾಗಿದೆ. ಸಂಗೀತ ಸಾಹಿತ್ಯದಲ್ಲಿ ಭಾವನೆಯೆ ಆತ್ಮ. ಸಂಗೀತ ಎಲ್ಲವನ್ನು ಮರೆಸುತ್ತದೆ ಇದರ ಮಹತ್ವವನ್ನು ವಿದ್ಯಾರ್ಥಿಗಳು ಮತ್ತು ಯುವಜನರು ಇಂತಹ ಶಿಬಿರ ಮತ್ತು ಕಾರ್ಯಗಾರಗಳಲ್ಲಿ ಭಾಗವಹಿಸುವುದರ ಮೂಲಕ ಸಂಗೀತ ಚಿಂತನೆಯನ್ನು ಬೆಳಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಇಂದಿನ ಸಿನಿಮಾ ಹಾಡುಗಳ ಸಾಹಿತ್ಯ ಕೆಟ್ಟದಾಗಿದೆ. ಮಕ್ಕಳನ್ನು ಹಾಳುಮಾಡುತ್ತಿದೆ. ಪಕ್ವತೆ ಇಲ್ಲದ ಸಾಹಿತ್ಯ ಮನಸನ್ನು ಕೆಡಿಸುತ್ತದೆ. ಜಾನಪದ ಸಂಗೀತದಲ್ಲಿ ಜಿಲ್ಲೆ ಪ್ರಸಿದ್ದವಾಗಿದೆ. ಇಂದಿನ ಯುವಜನರು ಜಾನಪದ ಸಾಹಿತ್ಯದಲ್ಲಿ ಬರುವ ಜೀವನದ ಪಾಠವನ್ನು ಕಲಿಯಬೇಕು. ಸಂಗೀತದ ಮೂಲಕ ಅನೇಕ ರೋಗಗಳು ವಾಸಿಯಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಘುಲೀಲಾ ಸಂಗೀತ ಮಂದಿರದ ನಿರ್ದೇಶಕಿ ಸುನೀತಾಚಂದ್ರಕುಮಾರ್ ಮತನಾಡಿ, ಸುಗಮ ಸಂಗೀತ ಹಾಡುವವನಿಗೆ ಸುಗಮವಲ್ಲ. ಶಾಸ್ತ್ರಿಯ ಸಂಗೀತ, ಸ್ವರ ಅರ್ಥ ಕಲಿತು ಹಾಡುವುದನ್ನು ರೂಡಿಸಿಕೊಳ್ಳಬೇಕು. ಸುಗಮ ಸಂಗೀತ ಸಾಹಿತ್ಯ, ಸಂಗೀತದ ಮೂಲಕ ಅರ್ಥವಾಗಬೇಕು. ಯುವಜನತೆ ಕನ್ನಡ ನಾಡು ನುಡಿಗಾಗಿ ಕೆಲಸಮಾಡುವುದರ ಜೊತೆಗೆ ಕನ್ನಡದ ರಾಯಭಾರಿಗಳಾಗಬೇಕು. ಕನ್ನಡ ಭಾಷೆ ಬಗ್ಗೆ ಒಲವು, ಪ್ರೀತಿ ಇರಬೇಕು ಎಂದು ಹೇಳಿದರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಸಂಚಾಲಕ ಆನಂದಮಾದಲಗೆರೆ ಮಾತನಾಡಿ, ಮನುಷ್ಯನ ವ್ಯಕ್ತಿತ್ವವನ್ನು ಬದಲಿಸುವ ಶಕ್ತಿ ಸಂಗೀತಕ್ಕಿದೆ.ಸ ಶಿಬಿರಗಳ ಮೂಲಕ ಸಂಗೀತದ ಪ್ರಕಾರಗಳನ್ನು ನಾಡಿನ ಮೂಲೆಮೂಲೆಗೂ ತಲುಪಿಸುವ ಕಾರ್ಯಗಳನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮಾಡುತ್ತಿದೆ ಎಂದರು.
ಶಿಬಿರದ ನಿರ್ದೇಶಕರಾದ ಬಿ.ಬಸವರಾಜು ಮಾತನಾಡಿ ಚಾಮರಾಜನಗರ ಗಡಿಜಿಲ್ಲೆಯ ಯುವ ಜನರಿಗೆ ಸುಗಮ ಸಂಗೀತ ತರಬೇತಿ ಶಿಬಿರವನ್ನು ನಡೆಸಲು ಅನುವು ಮಾಡಿಕೊಟ್ಟ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರು, ರಿಜಿಸ್ಟ್ರಾರ್, ಸದಸ್ಯ ಸಂಚಾಲಕರು ಮತ್ತು ಸದಸ್ಯರುಗಳನ್ನು ಅಭಿನಂದಿಸಿದರು.
ಇದೆ ಸಂದರ್ಭದಲ್ಲಿ ಮೂರು ದಿನಗಳಿಂದಲೂ ಶಿಬಿರದಲ್ಲಿ ಪಾಲ್ಗೊಂಡಿದ್ದ 135 ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಸುಗಮ ಸಂಗೀತ ಸಂಪನ್ಮೂಲ ವ್ಯಕ್ತಿಗಳಾದ ಸಿ.ಎಂ.ನರಸಿಂಹಮೂರ್ತಿ, ಪುರುಶೋತ್ತಮಕಿರಗಸೂರು, ಕವಿ ಡಾ.ಸುರೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಜಿ.ರಾಜಪ್ಪ, ಸುಗಮ ಸಂಗೀತ ಗಾಯಕಿ ಲತಾ, ಜೆ.ಬಿ,ಮಹೇಶ್ ಭಾಗವಹಿಸಿದ್ದರು.

Leave a Comment