ಸುಖೋಯ್ ವಿಮಾನಕ್ಕೆ ಬ್ರಹ್ಮೋಸ್ ಅಳವಡಿಕೆ

ನವದೆಹಲಿ. ನ. ೧೪- ಶತ್ರು ಪಾಳಯದ ನಿರ್ದಿಷ್ಟ ಗುರಿಗಳನ್ನು ನಿಖರವಾಗಿ ಉಡಾಯಿಸಬಲ್ಲ ವಿನಾಶಕಾರಿ ಬ್ರಹ್ಮೋಸ್ ಕ್ಷಿಪಣಿಯನ್ನು ಸುಖೋಯ್ ಯುದ್ಧ ವಿಮಾನದ ಮೂಲಕ ಉಡಾವಣೆ ಮಾಡಲು ಭಾರತ ಸನ್ನದ್ಧತೆ ನಡೆಸಿದೆ.
ಆಕಾಶದಿಂದ ಭೂಮಿಗೆ ಚಿಮ್ಮಬಲ್ಲ ಈ ಕ್ಷಿಪಣಿ 3200 ಕಿ.ಮೀ. ವ್ಯಾಪ್ತಿಯ ಗುರಿಗಳನ್ನು ಶಬ್ಧ ವೇಗಕ್ಕಿಂತ 3 ಪಟ್ಟು ವೇಗದಲ್ಲಿ ಚಲಿಸಿ ಉಡಾಯಿಸುವ ಸಾಮರ್ಥ್ಯ ಪಡೆದಿದೆ.
ಹೈಪರ್ ಸಾನಿಕ್ ಮಾದರಿಯ ಬ್ರಹ್ಮೋಸ್ ಕ್ಷಿಪಣಿಯನ್ನು ಸುಖೋಯ್- 30 ಎಂ.ಕೆ.ಐ.ಗೆ ಜೋ‌ಡಿಸಿದರೆ, ಶತ್ರು ಪಾಳಯದ ಒಳಗಿನ ಉಗ್ರರ ನೆಲೆಗಳು ಸೇರಿದಂತೆ ಭೂತಾಳದ ಪದರಗಳು, ಬಂಕರ್‌ಗಳು, ಕಮಾಂಡ್ ಕಂಟ್ರೋಲ್ ಕೇಂದ್ರಗಳು ಅತಿ ಸೂಕ್ಷ್ಮ ರಕ್ಷಣಾ ವ್ಯವಸ್ಥೆಗಳನ್ನು ಬಹು ದೂರದಿಂದಲೇ ಧ್ವಂಸ ಮಾಡುವ ಸಾಮರ್ಥ್ಯ ಲಭ್ಯವಾಗುತ್ತದೆ.
ಸೀಮಿತ ವಲಯದ ಗುರಿಗಳನ್ನು ಧ್ವಂಸ ಮಾಡುವುದರ ಜೊತೆಗೆ ಸಮಗ್ರ ಮಾಧ್ಯಮದಲ್ಲಿಯ ವಿಮಾನ ವಾಹಕ ಹಡಗುಗಳ ಮೇಲೂ ಇದರಿಂದ ನಿಖರ ದಾಳಿ ನಡೆಸಬಹುದಾಗಿದೆ.
ಬ್ರಹ್ಮೋಸ್ ಕ್ಷಿಪಣಿಗಳ ಕೆಲವು ಮಾದರಿಗಳನ್ನು ನೌಕಾಪಡೆಯಲ್ಲಿ ಬಳಕೆಗೆ ತಂದಿದ್ದು, ಇದನ್ನು ಯುದ್ಧ ಹಡಗುಗಳಲ್ಲಿ ಅಳವಡಿಸಿ 290 ಕಿ.ಮೀ. ವ್ಯಾಪ್ತಿಯ ಗುರಿಗಳನ್ನು ಭೇಧಿಸುವ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ.
ಈಗ ಇದನ್ನು ದಾಳಿ ವಿಮಾನಗಳ ಮೂಲಕ ಪ್ರಯೋಗಿಸುವ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆಯಲ್ಲಿ ಇವು ಯಶಸ್ವಿಯಾದರೆ ಭಾರತೀಯ ವಾಯುಪಡೆಗೆ ಪ್ರಬಲವಾದ ದಾಳಿಯ ಸಾಮರ್ಥ್ಯ ಲಭ್ಯವಾಗಲಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

Leave a Comment