ಸುಂದರ ಸಮಾಜ ನಿರ್ಮಾಣಕ್ಕೆ ಶ್ರಮಿಸಲು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕರೆ

ಬೆಂಗಳೂರು. ಫೆ.16- ಶರಣರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು‌ ಶರಣರ ಆಶಯದಂತೆ ಸುಂದರ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು‌ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕರೆ ನೀಡಿದ್ದಾರೆ.
ಇಂದು ಶಿವಯೋಗ ಸಂಭ್ರಮ ಅಸಂಖ್ಯ ಪ್ರಮಥರ ಗಣಮೇಳ ಸರ್ವಶರಣರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಶರಣರು ಜಾತ್ಯಾತೀತ ಸುಂದರ ಸಮಾಜ ನಿರ್ಮಾಣಕ್ಕೆ ಹೋರಾಟ ನಡೆಸಿದ್ದಾರೆ. ಅನೇಕ ಮಾನವ ಹಕ್ಕುಗಳಿಗಾಗಿ ಪ್ರತಿಪಾದಿಸಿದ್ದಾರೆ. ಶೋಷಿತರು, ಕಾಯಕ ಯೋಗಿಗಳ ಏಳಿಗೆಗಾಗಿ ಶ್ರಮಿಸಿದ್ದಾರೆ. ಜಾತಿ ಮತ್ತು ಧರ್ಮ ದ ಹೆಸರಿನಲ್ಲಿ ಶೋಷಣೆಯ ವಿರುದ್ಧ ಬಂಡಾಯ ಎದ್ದು, ಕ್ರಾಂತಿ ಮಾಡಿದ್ದಾರೆ. ಜಾತ್ಯಾತೀತ ಮಾನವ ಧರ್ಮ ಉದಯಕ್ಕೆ ಶ್ರಮಿಸಿದ್ದಾರೆ. ಅದೇ ಶ್ರೇಷ್ಠ ವಾದ ಧರ್ಮ ಬಸವ ಧರ್ಮ. ಅವರು ಪ್ರತಿ ಪಾದಿಸಿದಂತಹ ಅನೇಕ ಮಾನವ ಹಕ್ಕುಗಳು ಕಾಯ್ದೆಯ ರೂಪದಲ್ಲಿ ಅನುಷ್ಠಾನವಾಗುತ್ತಿವೆ ಎಂದು ವಿವರಿಸಿದರು.
ವಿಶ್ವ ಗುರು ಬಸವಣ್ಣ ಹಾಗೂ ಅವರ ಸಮಕಾಲೀನ ಶರಣರು 900 ವರ್ಷಗಳ ಹಿಂದೆಯೇ ಸಾಮಾಜಿಕ ಸಮಾನತೆಗಾಗಿ ಕ್ರಾಂತಿ ಮಾಡಿದ್ದರೂ‌ ಅಸಮಾನತೆ ಇನ್ನೂ ಅಳಿದಿಲ್ಲ. ಶರಣರ ಆಶಯವಾಗಿದ್ದ ಸಾಮಾಜಿಕ ಸಮಾನತೆ ಕುರಿತು ಇಂದು ಎಲ್ಲರೂ ಚಿಂತಿಸಬೇಕಿದೆ ಎಂದರು.
ಮೊಟ್ಟ ಮೊದಲಿಗೆ ಸಂಸತ್ ಸ್ವರೂಪದ ಅನುಭವ ಮಂಟಪ ಆಯೋಜಿಸಿ, ಮಾನವ ಹಕ್ಕು, ಸಮಾನತೆಗೆ , ಸಾಮಾಜಿಕ ಪಿಡುಗಳ ಕುರಿತು ಚರ್ಚಿಸಿ, ನಿರ್ಣಯ ಕೈಗೊಂಡಿದ್ದು , ಅದೇ ಮಾದರಿಯಲ್ಲಿ ಸಂಸತ್ ನಲ್ಲಿ‌ ಚರ್ಚೆಗಳಾಗಿ ನಿರ್ಣಯಗಳಾಗುತ್ತಿವೆ‌ ಎಂದು ತಿಳಿಸಿದರು.

Leave a Comment