ಸೀರೆ ಕೊಳ್ಳಲು ಮುಗಿಬಿದ್ದ ಹೆಂಗಳೆಯರು

ಆಧಾರ್ ಕಡ್ಡಾಯ; ಮಹಿಳೆಯರ ಆಕ್ರೋಶ
ಇಂದಿನಿಂದ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ವಿತರಣೆ
ಮೈಸೂರು, ಸೆ. 11. ರೇಷ್ಮೇ ಸಚಿವ ಸಾ.ರಾ. ಮಹೇಶ್ ಕನಸಿನ ಯೋಜನೆಯಂತೆ ರಾಜ್ಯದಲ್ಲಿ ರಿಯಾಯತಿ ದರದಲ್ಲಿ ಮೈಸೂರು ರೇಷ್ಮೇ ಸೀರೆ ಮಾರಾಟಕ್ಕೆ ವೇದಿಕೆ ಸಜ್ಜುಗೊಂಡಿದೆ. ಮಧ್ಯಮ ವರ್ಗದವರಿಗೂ ಮೈಸೂರು ರೇಷ್ಮೆ ಸೀರೆ ತಲುಪಿಸುವ ಉದ್ದೇಶದಿಂದ ರಿಯಾಯಿತಿ ದರದಲ್ಲಿ ಸೀರೆ ಮಾರಾಟ ಮಾಡಲು ಉದ್ದೇಶಿಸಲಾಗಿದ್ದು, ಇಂದಿನಿಂದ ಮಾರಾಟಕ್ಕೆ ಚಾಲನೆ ಸಿಗಲಿದೆ.
ಸಿಎಂ ಚಾಲನೆ
ಕೆ.ಎಸ್.ಐ.ಸಿ.ಯಿಂದ ಗೌರಿ ಗಣೇಶ ಹಬ್ಬದ ಕೊಡುಗೆಯಾಗಿ 4,500 ರೂಪಾಯಿಗೆ ಮೈಸೂರು ರೇಷ್ಮೆ ಸೀರೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಈ ಮಹತ್ವಾಕಾಂಕ್ಷಿ ಯೋಜನೆಗೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಕೆ.ಎಸ್.ಐ.ಸಿ. ಮಾರಾಟ ಮಳಿಗೆಯಲ್ಲಿ ಚಾಲನೆ ನೀಡಲಿದ್ದಾರೆ.
5 ಕಡೆ ವಿತರಣೆ
ಬೆಳಿಗ್ಗೆ 10 ರಿಂದ 3 ಗಂಟೆವರೆಗೆ ಅಧಾರ್ ಕಾರ್ಡ್ ನೀಡಿ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದ್ದು, ಒಬ್ಬರಿಗೆ ಒಂದು ಸೀರೆ ಮಾತ್ರ ಮಾರಾಟ ಮಾಡಲು ಉದ್ದೇಶಿಸಲಾಗಿದೆ. 3 ಗಂಟೆ ನಂತರ ಲಾಟರಿ ಮೂಲಕ ಆಯ್ಕೆ ಮಾಡಿ, ಮೈಸೂರು, ರಾಮನಗರ, ಬೆಳಗಾವಿ, ದಾವಣಗೆರೆ, ಬೆಂಗಳೂರಿನ ಮಾರಾಟ ಮಳಿಗೆಗಳಲ್ಲಿ ಸೀರೆ ಮಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸ್ಪನ್ ಸಿಲ್ಕ್ ಮಿಲ್ಸ್ ಆವರಣ ಮಂಗಳವಾರ ಪೇಟೆ ಚನ್ನಪಟ್ಟಣ. ಮೈಸೂರು ಮೃಗಾಲಯದ ಮಾರಾಟ ಮಳಿಗೆ ಮೈಸೂರು. ಕನ್ನಡ ಸಾಹಿತ್ಯ ಭವನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಬೆಳಗಾವಿ. ರೋಟರಿ ಬಾಲಭವನ ದಾವಣಗೆರೆ. ಎಫ್.ಕೆ.ಸಿ.ಸಿ.ಐ ಕಟ್ಟಡದ ಆವರಣ ಕೆಂಪೇಗೌಡ ರಸ್ತೆ ಬೆಂಗಳೂರು ಸೇರಿದಂತೆ ಒಟ್ಟು 5 ಕಡೆ ಮಾರಾಟ ಮಳಿಗೆ ತೆರೆಯಲಾಗಿದೆ ಎಂದು ರೇಷ್ಮೆ ಸಚಿವ ಸಚಿವ ಸಾ.ರಾ ಮಹೇಶ್ ಮಾಹಿತಿ ನಿಡಿದ್ದಾರೆ.
ಮಹಿಳೆಯರ ಪ್ರತಿಭಟನೆ
ರಿಯಾಯಿತಿ ದರದಲ್ಲಿ ಸೀರೆ ಖರೀದಿಸಲು ಕೆಎಸ್‍ಐಸಿ ರೇಷ್ಮೆ ಸೀರೆ ಮಳಿಗೆಗೆ ಹೆಂಗಳೆಯರು ಮುಗಿಬಿದ್ದರು. ಮೃಗಾಲಯದ ಎದುರಿನ ಕೆಎಸ್‍ಐಸಿ ಸಿಲ್ಕ್ ಮಳಿಗೆ ಮುಂದೆ ತಮ್ಮ ಹೆಸರು ನೊಂದಾಯಿಸಲು ಮಂಗಳವಾರ ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತರು. ಆದರೆ, ನೊಂದಣಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವ ಕ್ರಮವನ್ನು ಖಂಡಿಸಿ ಕೆಲ ಮಹಿಳೆಯರು ಪ್ರತಿಭಟನೆ ಮಾಡಿದರು. ಆಧಾರ್ ಕಾರ್ಡ್ ನೀಡುವುದನ್ನು ಕಡ್ಡಾಯ ಮಾಡುವ ಬದಲು ಸರತಿ ಸಾಲಿನಲ್ಲಿ ನಿಂತ ಎಲ್ಲರಿಗೂ ಸೀರೆ ವಿತರಣೆ ಮಾಡಬೇಕು ಎಂದು ಪಟ್ಟುಹಿಡಿದರು. ಆಧಾರ್ ಕಾರ್ಡ್ ಇಲ್ಲದವರಿಗೂ ಸೀರೆ ನೀಡುವಂತೆ ಒತ್ತಾಯಿಸಿ ಮಹಿಳೆಯರು ಧಿಕ್ಕಾರ ಕೂಗುತ್ತಿದ್ರು ಪಕ್ಕದಲ್ಲೇ ಇದ್ದ ಪೊಲೀಸರಿಂದ ಯಾವುದೇ ಪ್ರತಿಕ್ರಿಯೇ ದೊರೆಯಲಿಲ್ಲ.
1500 ಸೀರೆ ವಿತರಣೆ
ಸರ್ಕಾರದ ಆದೇಶದ ಮೇರೆಗೆ ರೇಷ್ಮೆ ಸೀರೆ ನೀಡುತ್ತಿದ್ದು, ಅದರಲ್ಲೂ ಪಕ್ಕಾ ಜರಿ ರೇಷ್ಮೆ ಸೀರೆ ಮಾರಾಟ ಮಾಡುತ್ತಿದ್ದೇವೆ ಎಂದು ಕೆಎಸ್‍ಐಸಿ ಪ್ರಧಾನ ವ್ಯವಸ್ಥಾಪಕ ಕೃಷ್ಣಪ್ಪ ಹೇಳಿದ್ದಾರೆ. ಈಗ ಮೊದಲು 1500 ಸೀರೆಗಳನ್ನ ನೀಡುತ್ತಿದ್ದೇವೆ. ಮೊದಲು ಲಾಟರಿ ಮೂಲಕ ಸೀರೆ ಕೊಡಲು ಉದ್ದೇಶವಿತ್ತು. ಆದರೆ ಅದು ಬದಲಾಗಿದ್ದು, ಈಗ ಆಧಾರ್ ಕಾರ್ಡ್ ಹೊಂದಿದ ಮಹಿಳೆಯರಿಗೆ ಮಾತ್ರ ಸೀರೆ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Leave a Comment