ಸೀರೆ ಕೇಳಿದ ಪತ್ನಿಯ ಕೊಲೆಗೈದ!

ಆರೋಪಿ ಪತಿಗೆ ನ್ಯಾ.ಬಂಧನ
ಮಂಗಳೂರು, ಆ.೧೮- ಗೃಹಿಣಿಯ ಕುತ್ತಿಗೆಗೆ ಚೂಡಿದಾರ ಶಾಲು ಬಿಗಿದು ಕೊಲೆಗೈದ ಘಟನೆಗೆ ಸಂಬಂಧಿಸಿ ಆರೋಪಿ ಪತಿ ಫಿರೋಝ್‌ನನ್ನು ಸುಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಳೆದ ಬುಧವಾರ ಘಟನೆ ನಡೆದಿದ್ದು, ಸುಳ್ಯದ ಜ್ಯೋತಿ ಸರ್ಕಲ್ ನಿವಾಸಿ ಫಿರೋಝ್ ಎಂಬಾತನ ಪತ್ನಿ ಆಯಿಶಾ(೨೨) ಕೊಲೆಗೀಡಾದ ಮಹಿಳೆ.
ಫಿರೋಝ್ ಕಾರ್ಕಳದ ಕರಿಯಕಲ್ಲು ನಿವಾಸಿ ರಶೀದ್ ಎಂಬವರ ಪುತ್ರಿ ಆಯಿಶಾರನ್ನು ಎರಡೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದು, ಅವರಿಗೆ ಒಂದು ವರ್ಷದ ಹೆಣ್ಣು ಮಗುವಿದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಫಿರೋಝ್ ಇತ್ತೀಚೆಗೆ ವಿದೇಶದಿಂದ ಹಿಂದಿರುಗಿದ್ದ. ಆ.೧೧ರಂದು ಫಿರೋಝ್ ಪತ್ನಿ ಆಯಿಶಾ ಮತ್ತು ಮಗುವಿನೊಂದಿಗೆ ಕಾರಿನಲ್ಲಿ ಕಾರ್ಕಳಕ್ಕೆ ತೆರಳಿದ್ದು, ಮರುದಿನ ಅಲ್ಲಿಂದ ಕಾಞಂಗಾಡಿನಲ್ಲಿರುವ ಮಾವನ ಮನೆಗೆ ಹೋಗಿ ಆ.೧೫ರಂದು ಸುಳ್ಯಕ್ಕೆ ಹಿಂದಿರುಗಿದ್ದರು. ಸಂಜೆ ಸುಮಾರು ೪:೩೦ರ ವೇಳೆ ಆಯಿಶಾ ಅಸ್ವಸ್ಥಗೊಂಡಿದ್ದು, ಮಾವ ಮತ್ತು ಪತಿ ಆಸ್ಪತ್ರೆಗೆ ಸಾಗಿಸಿದರೆಂದು ಆ ವೇಳೆಗೆ ಮಹಿಳೆ ಮೃತಪಟ್ಟಿದ್ದರೆಂದು ತಿಳಿದುಬಂದಿದೆ. ವಿಷಯ ತಿಳಿದು ಕಾರ್ಕಳದಿಂದ ಸುಳ್ಯಕ್ಕೆ ಆಗಮಿಸಿದ ಆಯಿಶಾರ ತವರು ಮನೆಯವರು ಸುಳ್ಯ ಪೊಲೀಸ್ ಠಾಣೆಗೆ ತೆರಳಿ ಪತಿಯೇ ಆಕೆಯನ್ನು ಕೊಲೆಗೈದಿರುವುದಾಗಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಫಿರೋಝ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ವಿಚಾರಣೆಯ ವೇಳೆ ಆತ ತಪ್ಪೊಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ. ಕಾರಿನಲ್ಲಿ ಕಾಸರಗೋಡಿನಿಂದ ಹಿಂದಿರುಗುತ್ತಿದ್ದಾಗ ಆಯಿಷಾ ತನಗೊಂದು ಸೀರೆ ತೆಗೆಸಿಕೊಡಲು ಪತಿಯನ್ನು ಒತ್ತಾಯಿಸಿದರೆನ್ನಲಾಗಿದೆ. ಈ ವೇಳೆ ಪತಿ ಫಿರೋಝ್ ಹಣ ಕಡಿಮೆ ಇದೆಯೆಂದು ಹೇಳಿ ಸೀರೆ ಕೊಡಿಸಲು ನಿರಾಕರಿಸಿದನೆನ್ನಲಾಗಿದೆ. ಇದರಿಂದ ಅವರೊಳಗೆ ಅಸಮಾಧಾನವುಂಟಾಗಿ ಮನೆಗೆ ಬಂದ ಬಳಿಕವೂ ಜಗಳ ನಡೆದಿದೆಯೆನ್ನಲಾಗಿದೆ. ಈ ವೇಳೆ ಆಯಿಶಾರ ಕುತ್ತಿಗೆಗೆ ಚೂಡಿದಾರ ಶಾಲು ಬಿಗಿದು ಕೊಲೆಗೈದಿರುವುದಾಗಿ ಆರೋಪಿ ಫಿರೋಝ್ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment