ಸೀರೆಗಾಗಿ ಮುಂದುವರೆದ ಜಗಳ

ಮಹಿಳೆಯ ಕಾದಾಟ ನಿಯಂತ್ರಿಸಿದ ಪೊಲೀಸರು
ದಾವಣಗೆರೆ, ಸೆ. 12-ನಾರಿಯರಿಗೆ ಸೀರೆ ಎಂದರೆ ಬಲು ಅಚ್ಚುಮೆಚ್ಚು, ಎಲ್ಲೇ ಸೇಲ್ ಬರಲಿ ಅಲ್ಲಿ ನಾರಿಮಣಿಗಳದ್ದೇ ಕಾರುಬಾರು. ಅದರಲ್ಲೂ ರಿಯಾಯಿತಿ ಇದ್ದರಂತು ಪುರುಷರ ಜೇಬಿಗೆ ಕತ್ತರಿಯೇ ಸರಿ….ದಾವಣಗೆರೆಯಲ್ಲೂ ಸಹ ರಿಯಾಯಿತಿ ನೀಡಲಾಗಿದ್ದ ಮೈಸೂರ್ ಸಿಲ್ಕ್ ಸೀರೆ ಖರೀದಿಸಲು ನಿನ್ನೆಯಿಂದಲೇ ಮಹಿಳೆಯರು ಮುಗಿಬಿದ್ದಿದ್ದಾರೆ. ನಗರದ ರೋಟರಿ ಬಾಲಭವನದಲ್ಲಿ ರಿಯಾಯಿತಿ ದರದಲ್ಲಿ ಕೆಎಸ್ಐಸಿ ವತಿಯಿಂದ 14 ಸಾವಿರ ರೂ ಮೌಲ್ಯದ ಅಪ್ಪಟ್ಟ ರೇಷ್ಮೆ ಸೀರೆಗಳನ್ನು ಕೇವಲ 4725 ಜಿಎಸ್ ಟಿ ಸೇರಿ ಮಾರಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿರುವ ಎಲ್ಲಾ ಕೆಎಸ್ಐಸಿ ಮಳಿಗೆಗಳಲ್ಲಿ ಈ ಮಾರಾಟ ವ್ಯವಸ್ಥೆ ಮಾಡಲಾಗಿದೆ. ನಿನ್ನೆಯೇ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ನೀ‌ಡಿ ಸೀರೆಗಳನ್ನು ಬುಕ್ ಮಾಡಿದ್ದರು. ಕೆಎಸ್ಐಸಿಯವರು ಸಹ 252 ಸೀರೆಗಳನ್ನು ಮಾರಾಟಕ್ಕಿಟ್ಟಿದ್ದರು. ಇದರಲ್ಲಿ ಕೇವಲ 152 ಸೀರೆಗೆ ಟೋಕನ್ ಗಳನ್ನು ನೀಡಿದ್ದಾರೆ. ಇಂದು 100 ಸೀರೆಗಳಿಗೆ ಟೋಕನ್ ನೀಡಲಾಗುತ್ತಿದೆ ಎಂದು ಕೆಎಸ್ಐಸಿ ಮ್ಯಾನೇಜರ್ ರಘುರಾಮ್ ತಿಳಿಸಿದ್ದಾರೆ. ಇದರಿಂದ ಇಂದು ಬೆಳಗಿನಿಂದಲೇ ನಗರದ ರೋಟರಿ ಬಾಲಭವನದಲ್ಲಿ ಜಮಾಯಿಸಿರುವ ಮಹಿಳೆಯರು ಟೋಕನ್ ಗಾಗಿ ಮುಗಿಬಿದ್ದಿದ್ದಾರೆ. ಹಾಗೂ ಕೆಎಸ್ಐಸಿಯವರೊಂದಿಗೆ ವಾಗ್ವಾದ ನಡೆಸಿದ್ದಾರೆ. ಇದರಿಂದ ಮಹಿಳೆಯರ ಜಗಳ ವಿಕೋಪಕ್ಕೆ ತಿರುಗಿದೆ. ಕೂಡಲೇ ಬಡಾವಣಾ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಸೀರೆ ಎಂದರೆ ಸಾಕು ಮಹಿಳೆಯರಿ ಬಲುಪ್ರೀತಿ… ಎಷ್ಟೇ ಕಷ್ಟವಾಗಲಿ ಇಷ್ಟಪಟ್ಟ ಸೀರೆ ಅದರಲ್ಲೂ ಮೈಸೂರು ಸಿಲ್ಕ್ ಸೀರೆ ಎಂದರೆ ಸುಮ್ಮನಿರುವವರಲ್ಲ. ಜಗಳವಾಡಿಯಾದರು ಸಹ ಪಡದೇ ತೀರುತ್ತಾರೆ. ಒಟ್ಟಾರೆ ಈ ಸೀರೆಗಳಿಗಾಗಿ ಜಗಳವೇ ನಡೆದಿದೆ.
ಕೇವಲ 252 ಸೀರೆ ಮಾರಾಟಕ್ಕೆ ಮಾತ್ರ ಅನುಮತಿ
ಕೆಎಸ್ ಐಸಿಯಿಂದ 252 ರೇಷ್ಮೆ ಸೀರೆಗಳನ್ನು ದಾವಣಗೆರೆ ವಿಭಾಗದಲ್ಲಿ ಮಾರಾಟ ಮಾಡಲು ಅನುಮತಿ ದೊರತಿದೆ. ಅದರಂತೆ ನಿನ್ನೆ ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ 152 ಟೋಕನ್ ಗಳನ್ನು ನೀಡಲಾಗಿದೆ.ಇನ್ನು 100 ಟೋಕನ್ ಗಳನ್ನು ನೀಡಬೇಕಾಗಿದೆ ಅಷ್ಟೇ. ಇನ್ನು ಹೆಚ್ಚುವರಿಯಾಗಿ ಟೋಕನ್ ಕೊಡುವುದಕ್ಕೆ ಅನುಮತಿ ಇಲ್ಲ. ಇದನ್ನು ತಿಳಿಸಿ ಹೇಳಿದರು ಮಹಿಳೆಯರು ಸಮಾಧಾನಗೊಳ್ಳುತ್ತಿಲ್ಲ. ನಮಗೆ ಅನುಮತಿ ಇರುವಷ್ಟೇ ಸೀರೆಗಳನ್ನು ಮಾರಾಟ ಮಾಡಲಾಗುತ್ತಿದೆ. ಅನುಮತಿ ಮೀರಿ ಸೀರೆಗಳನ್ನು ಮಾರಾಟ ಮಾಡುವ ಅವಕಾಶವಿಲ್ಲ. ಆದರೆ ಇದನ್ನು ಜನರು ಅರ್ಥ ಮಾಡಿಕೊಳ್ಳುತ್ತಿಲ್ಲ.
-ರಘುರಾಮ್
ಕೆಎಸ್ಐಸಿ ಮ್ಯಾನೇಜರ್ ಬೆಂಗಳೂರು
 ಸಿಗದ ಟೋಕನ್-ಮಹಿಳೆಯರ ಬೇಸರ
ನಿನ್ನೆ ಮುಂಜಾನೆಯಿಂದಲೂ ಮೈಸೂರ್ ಸಿಲ್ಕ್ ಸೀರೆ ಖರೀದಿಸಬೇಕೆಂದು ಬಂದಿದ್ದೇವೆ. ಆದರೆ ಇಲ್ಲಿ ಇರುವವರಿಗೆ ಮಾತ್ರ ನಾಲ್ಕೈದು ಟೋಕನ್ ನೀಡಲಾಗಿದೆ. ಬೆಳಗಿನಿಂದ ಕಾದವರಿಗೆ ನಿರಾಸೆ ಉಂಟಾಗಿದೆ. ನಮಗೆ ಇದುವರೆಗೂ ಟೋಕನ್ ಸಿಕ್ಕಿಲ್ಲ. ಕೆಎಸ್ಐಸಿಯಿಂದ 515 ಸೀರೆಗಳನ್ನು ನೀಡಲಾಗುತ್ತಿದೆ ಎಂದು ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ. ಆದರೆ ಇಲ್ಲಿ ಮಾತ್ರ 252 ಸೀರೆ ಎಂದು ಹೇಳುತ್ತಿದ್ದಾರೆ. ಇದರಿಂದ ನಮಗೆ ನಿರಾಸೆಯಾಗಿದೆ ಎಂದು ಬರಿಗೈಯಲ್ಲೇ ಮನೆಗೆ ತೆರಳಿದರು.
-ಹೇಮಾವತಿ, ಶಕುಂತಲಾ, ರತ್ನಮ್ಮ, ದುಗ್ಗಮ್ಮ
ನೊಂದ ಮಹಿಳೆಯರು.

Leave a Comment