ಸಿ.ಸಿ. ಪಾಟೀಲರಿಂದ ಕೀಳು ರಾಜಕಾರಣ: ಯಾವಗಲ್ಲ ಆರೋಪ

ನರಗುಂದ, ಏ. 16- ನಾನು ಒಬ್ಬ ಹಾಲಿ ಶಾಸಕನಾಗಿ ದುರ್ಬಲ ವರ್ಗದವರಿಗೆ ಹಾಗೂ ಕಡುಬಡವರಿಗೆ ತಲೆಗೊಂದು ಸೂರು ಕಲ್ಪಿಸಿಕೊಡುವ ಉದ್ದೇಶದಿಂದ ಸಾಕಷ್ಟು ಪ್ರಯಾಸ ಪಟ್ಟು ದೆಹಲಿಯವರೆಗೆ ಹೋಗಿ ಮಂಜೂರಾತಿ ಮಾಡಿಸಿಕೊಂಡು ಬಂದ 110 ಕೋಟಿ ರೂ. ವೆಚ್ಚದ 2 ಸಾವಿರ ಮನೆಗಳನ್ನು ನಾನೇ ಮಂಜೂರಾತಿ ಮಾಡಿಸಿಕೊಂಡು ಬಂದಿದ್ದೇನೆ ಎನ್ನುವ ರೀತಿಯಲ್ಲಿ ಮಾಜಿ ಶಾಸಕ ಸಿ.ಸಿ. ಪಾಟೀಲ ಫಲಾನುಭವಿಗಳಿಗೆ ಪತ್ರ ಬರೆಯುವ ಮೂಲಕ ಅತ್ಯಂತ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ಬಿ.ಆರ್. ಯಾವಗಲ್ಲ ಗಂಬೀರ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ರಾಜ್ಯ ಸರ್ಕಾರದ ಸಹಕಾರವಿಲ್ಲದೆ ಕೇಂದ್ರ ಸರಕಾರಕ್ಕೆ ಈ ಯೋಜನೆಗೆ ಅನುಮತಿ ನೀಡಲು ಬರುವುದಿಲ್ಲ. ಇವರು ಈ ಹಿಂದೆ ಮಾಡಿದ್ದ ಕ್ರಮಬದ್ಧವಲ್ಲದ ಅರ್ಜಿಗಳನ್ನು ರದ್ದು ಮಾಡಿ ಫಲಾನುಭವಿಗಳನ್ನು ಗುರುತಿಸಿ ಈ ಯೋಜನೆಗೆ ಮಂಜೂರಾತಿ ಪಡೆದುಕೊಂಡ ನಂತರ ಈ ಯೋಜನೆ ವಿಳಂಬವಾಗುವಂತೆ ಪುರಸಭೆಯಿಂದ ಅನೇಕ ಅಡ್ಡಿ ಆತಂಕಗಳನ್ನು ತರುವ ಕುತಂತ್ರ ನಡೆಸಿದ ಇದೇ ಮಾಜಿ ಶಾಸಕರು ಇಂದು ಈ ಯೋಜನೆಯ ಎಲ್ಲ ಅಡ್ಡಿ ಆತಂಕಗಳು ನಿವಾರಣೆಯಾಗಿ ಟೆಂಡರ್ ಕರೆಯುವ ಹಂತಕ್ಕೆ ಬಂದಾಗ ಇದನ್ನು ನಾನೇ ಮಂಜೂರಾತಿ ಮಾಡಿಸಿಕೊಂಡು ಬಂದಿದ್ದೇನೆ ಎನ್ನುವ ರೀತಿಯಲ್ಲಿ ಫಲಾನುಭವಿಗಳಿಗೆ ಪತ್ರ ಬರೆದು ನಂಬಿಸಲು ಹೊರಟಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.
ಕಳೆದ 5 ವರ್ಷಗಳ ನನ್ನ ಅಧಿಕಾರವಧಿಯಲ್ಲಿ ಈ ಕ್ಷೇತ್ರದ ಜನತೆಯ ಅಶೋತ್ತರಗಳಿಗೆ ಸ್ಪಂದಿಸಿ ಶಾಶ್ವತ ಕುಡಿಯುವ ನೀರಿನ ಯೋಜನೆ, ಸಮರ್ಪಕ ರಸ್ತೆಗಳ ನಿರ್ಮಾಣ, 5 ಸಾವಿರ ಕೃಷಿ ಹೊಂಡಗಳ ನಿರ್ಮಾಣ, ಇಂಜಿನಿಯರಿಂಗ್ ಕಾಲೇಜು, 3 ಮುರಾರ್ಜಿ ವಸತಿ ಶಾಲೆ, ಹೊಳೆ ಆಲೂರಿನಲ್ಲಿ ಡಿಪ್ಲೋಮಾ ಕಾಲೇಜು, 110 ಕೋಟಿ ರೂ. ವೆಚ್ಚದಲ್ಲಿ ನೀರಾವರಿ ಕಾಲುವೆಗಳ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ತೃಪ್ತಿ ನನಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಚಂಬಣ್ಣ ವಾಳದ ರಾಜು ಕಲಾಲ, ಎಮ್.ಎಮ್. ಮುಳ್ಳೂರ, ಎಮ್.ಬಿ. ಅರಹುಣಸಿ, ಹನಮರಡ್ಡಿ ಹೂಲಿ, ಉದಯ ಮುಧೋಳ ಕುರಹಟ್ಟಿ ಇತರರು ಉಪಸ್ಥಿತರಿದ್ದರು.

Leave a Comment