ಸಿಸಿ ಕ್ಯಾಮೆರಾ ಅಳವಡಿಕೆಗೆ ಕರೆ

ಹೊನ್ನಾಳಿ.ಜು.17; ಸಿಸಿ ಟಿವಿ ಕ್ಯಾಮೆರಾ ವಂಚಕರಿಂದ ರಕ್ಷಣೆ ಒದಗಿಸುತ್ತದೆ ಎಂದು ಪಿಎಸ್‍ಐ ಎನ್.ಸಿ. ಕಾಡದೇವರ ಹೇಳಿದರು.
ದೇವನಾಯಕನಹಳ್ಳಿ ವ್ಯಾಪ್ತಿಯ ನಿವಾಸಿಗಳಿಗೆ ಇಲ್ಲಿನ ಟಿಬಿ ವೃತ್ತದ ಸರಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಸಿಸಿ ಟಿವಿ ಕ್ಯಾಮೆರಾ ನಿಮ್ಮ ಮನೆಯ ಕಾವಲು ನಾಯಿಯಂತೆ ಕೆಲಸ ಮಾಡುತ್ತದೆ. ಮನೆ ನಿರ್ಮಾಣಕ್ಕೆ ಸಾಗವಾನಿ, ಬೀಟೆ ಸೇರಿದಂತೆ ವಿವಿಧ ಜಾತಿಯ ದುಬಾರಿ ಬೆಲೆಯ ಮರಗಳನ್ನು ನಾವು ಬಳಸುತ್ತೇವೆ. ಆದರೆ, ಕೇವಲ 20 ಸಾವಿರ ರೂ.ಗಳನ್ನು ವ್ಯಯಿಸಿ ಸಿಸಿ ಟಿವಿ ಕ್ಯಾಮೆರಾ ಖರೀದಿಸಲು ಹಿಂದೆ ಮುಂದೆ ನೋಡುತ್ತೇವೆ. ಮನೆಯ ನಾಲ್ಕೂ ಭಾಗಗಳಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದರೆ ನಿಮ್ಮ ಮನೆಗೆ ಬಂದು ಹೋಗುವವರ ವಿವರ ಲಭ್ಯವಾಗುತ್ತದೆ. ಆದ್ದರಿಂದ, ಎಲ್ಲರೂ ಈ ಬಗ್ಗೆ ಗಮನಹರಿಸಬೇಕು.

ನಾಗರೀಕತೆ ಬೆಳೆದಂತೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ತಮ್ಮ ಕೈಚಳಕದಿಂದ ನಿಮ್ಮ ಅಮೂಲ್ಯವಾದ ಒಡವೆ-ವಸ್ತುಗಳನ್ನು ಅಪಹರಿಸುವ ಜನ ನಿಮ್ಮ ಮನೆಗೆ ಬರಬಹುದು. ಆದ್ದರಿಂದ, ಸಿಸಿ ಟಿವಿ ಕ್ಯಾಮೆರಾವನ್ನು ಪ್ರತಿಯೊಂದು ಮನೆಗಳಲ್ಲಿಯೂ ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಮನೆಯ ರಕ್ಷಣೆ ಮಾಡಿಕೊಳ್ಳಬಹುದು ಎಂದು ಸೂಚಿಸಿದರು. ವಂಚಕರು ಸಾಮಾನ್ಯ ಮನುಷ್ಯರಂತೆಯೇ ಕಾಣುತ್ತಾರೆ. ನಿಮ್ಮ ಮನೆ ಬಾಗಿಲಿಗೆ ಬಂದು ನಕಲಿ ಬಂಗಾರ ನೀಡಿ ಅಸಲಿ ಬಂಗಾರ ಪಡೆದುಕೊಂಡು ಹೋಗುತ್ತಾರೆ. ಶೂನ್ಯ ಬಾಕಿ ಆಧಾರದ ಮೇಲೆ ಬ್ಯಾಂಕ್ ಖಾತೆ ತೆರೆಯುತ್ತೇವೆ ಎಂದು ಹೇಳಿ ಆಧಾರ್ ಕಾರ್ಡ್, ಎಟಿಎಂ ಕಾರ್ಡ್‍ಗಳನ್ನು ಪಡೆಯುತ್ತಾರೆ. ಎಟಿಎಂ ಕಾರ್ಡ್‍ನ ಪಾಸ್‍ವರ್ಡ್ ಪಡೆದುಕೊಂಡು ನಿಮ್ಮನ್ನು ಸಂಪೂರ್ಣ ವಂಚಿಸುವಂಥ ಕೆಲಸ ಮಾಡುತ್ತಾರೆ. ಮನೆಗೆ ನಂಬರ್ ಪ್ಲೇಟ್ ಮಾಡಿಕೊಡುತ್ತೇವೆ ಎಂದು ಹಣ ಪಡೆದುಕೊಳ್ಳುತ್ತಾರೆ. ಆದರೆ, ಇದ್ಯಾವುದೂ ನಿಮಗೆ ಗೊತ್ತಾಗುವುದಿಲ್ಲ. ನೀವು ಮೋಸ ಹೋಗಿರುತ್ತೀರಿ. ಅಂಥ ನಯವಂಚಕರು ನಿಮ್ಮ ಸುತ್ತ ಇರುತ್ತಾರೆ. ಆದ್ದರಿಂದ, ಎಚ್ಚರಿಕೆಯಿಂದ ಇರಬೇಕು. ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದರೆ ಈ ಎಲ್ಲಾ ಮೋಸಗಳನ್ನು ಮಾಡಲು ಮನೆಗೆ ಬರುವ ವ್ಯಕ್ತಿಯ ಚಿತ್ರಣ ದಾಖಲಾಗುತ್ತದೆ. ಆಗ ಅವರನ್ನು ಸುಲಭವಾಗಿ ಪತ್ತೆಹಚ್ಚಬಹುದು. ಆದ್ದರಿಂದ, ಪ್ರತಿಯೊಬ್ಬ ಮನೆಯವರೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು ಎಂದು ವಿವರಿಸಿದರು.
ಎಚ್. ಕಡದಕಟ್ಟೆ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ನಾಗಪ್ಪ, ಉಪಾಧ್ಯಕ್ಷ ಮಾದಪ್ಪ, ಕಂದಾಯ ನಿರೀಕ್ಷಕ ಮಂಜುನಾಥ್ ಇಂಗಳಗೊಂದಿ ಉಪಸ್ಥಿತರಿದ್ದರು. ದೇವನಾಯಕನಹಳ್ಳಿ ವ್ಯಾಪ್ತಿಯ ನೂರಾರು ನಿವಾಸಿಗಳು ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದರು.

Leave a Comment