ಸಿಲ್ಲಿಲಲ್ಲಿಯಲ್ಲಿ ಕಾಂಪೌಂಡರ್ ಸಂಗಪ್ಪ ಮಾದರಿಯ ಕೆಎಸ್‌ಎ ಅಧಿಕಾರಿ

ಸಿಲ್ಲಿ ಲಲ್ಲಿ ಧಾರವಾಹಿ ನೋಡಿದವರಿಗೆ ಪ್ರತಿಯೊಂದು ಪಾತ್ರ ಕಣ್ಣು ಮುಂದೆ ಬಂದು ಹೋಗುತ್ತದೆ. ಅಷ್ಟರ ಮಟ್ಟಿಗೆ ಆ ಧಾರವಾಹಿ ಜನರನ್ನು ಮೋಡಿ ಮಾಡಿತ್ತು. ಆ ಧಾರವಾಹಿಯಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್, ಅನೇಕರು ಇಂದು ದೊಡ್ಡ ಮಟ್ಟಿಗೆ ಬೆಳೆದು ನಿಂತಿದ್ದಾರೆ.

ಸಂಗಮೇಶ ಉಪಾಸೆ. ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟಿನಲ್ಲಿ ಅವರ ಹೆಸರು ಸಂಗಪ್ಪ ಉಪಾಸೆ ಎಂದೇ ದಾಖಲಾಗಿರುವುದರಿಂದ ಅವರನ್ನೀಗ ಸಂಗಪ್ಪ ಉಪಾಸೆ ಎಂದೇ ಕರೆಯಲಾಗುತ್ತದೆ. ಬಿಬಿಎಂಪಿಯಲ್ಲಿ ಅಧಿಕಾರಿಯಾಗಿದ್ದ ಸಂಗಪ್ಪ ಉಪಾಸೆ ಅವರಿಗೆ ಅಂಜುಟಗಿಲು ಸಂಮಾರು ಎಂಬ ಕಾವ್ಯನಾಮವೂ ಇದೆ! ಕೆಎಎಸ್ ಮಾಡಿಕೊಂಡಿರುವ ಇವರು, ಕೆಲ ವರ್ಷಗಳ ಹಿಂದೆ ಸಿಲ್ಲಿ ಲಲ್ಲಿ’ ಧಾರಾವಾಹಿಯಲ್ಲಿ ಕಾಂಪೌಂಡರ್‌ನ ಪಾತ್ರ ಮಾಡಿಕೊಂಡಿದ್ದವರು ಅಂದರೆ ನಂಬುವುದು ಕಷ್ಟ. ಆದರೆ ಇದು ನಿಜ. ಹೊಟ್ಟೆಪಾಡಿಗಾಗಿ ಬಣ್ಣ ಹಚ್ಚಿ, ಕೋಡಂಗಿಯಂತೆ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಿದ್ದ ಸಂಗಮೇಶ, ಹೆಸರಘಟ್ಟ ರಸ್ತೆಯಲ್ಲಿರುವ ಬಿಬಿಎಂಪಿಯಲ್ಲಿ ಹಣಕಾಸು ವಿಭಾಗದ ಅಸಿಸ್ಟೆಂಟ್ ಕಂಟ್ರೋಲರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಮೂರು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಸಂಗಮೇಶ, ಈಗ ಸರಕಾರದ ಗೌರವಾನ್ವಿತ ಅಧಿಕಾರಿ. ಓಡಾಡಲು ಸರಕಾರಿ ಕಾರ್ ಇದೆ. ವಾಸಕ್ಕೆ ಸರಕಾರದ ಮನೆಯಿದೆ. ಕೆಲಸ ಮಾಡಲು ಸರಕಾರಿ ಕಚೇರಿಯಿದೆ. ಜತೆಗೆ ಏಳೆಂಟು ಮಂದಿ ಸಹಾಯಕರಿದ್ದಾರೆ.

ಅದರಲ್ಲಿ ಫೇಮಸ್ ಇನ್ ಸರ್ಜರಿ ಅಂಡ್ ಭರ್ಜರಿ ಡಾಕ್ಟರ್‌ಗೆ ಕಾಂಪೌಂಡರ್ ಆಗಿ ನಟನೆ ಮಾಡಿದ ಸಂಗಪ್ಪ ಉಪಾಸಿ ಅವರನ್ನು ಜನ ಈಗಲೂ ನೆನೆಸಿಕೊಂಡು ನಗುತ್ತಾರೆ. ಅವರು ಅಂದು ಇಟ್ಟ ಕಚಗುಳಿ ನಗು ಇಂದಿಗೂ ಜನರು ಮರೆತ್ತಿಲ್ಲ ಎನ್ನಬಹುದು. ಇದೀಗ ಸಂಗಪ್ಪ ಅವರು ಕೆಎಎಸ್ ಅಧಿಕಾರಿಯಾಗಿ ಮಾದರಿಯಾಗಿದ್ದಾರೆ.

ಸಂಗಪ್ಪ ಉಪಾಸಿ.. ಈ ಹೆಸರು ಹೇಳಿದರೆ ನಿಮಗೆ ಇವರ ಪರಿಚಯ ಆಗುವುದು ಕಷ್ಟ. ನೀವು ಸಿಲ್ಲಿ ಲಲ್ಲಿ ನೋಡಿರಬೇಕು..  ಆ ಧಾರಾವಾಹಿಯಲ್ಲಿ ಕಾಂಪೌಡರ್ ಆಗಿ ಕಾಣಿಸಿಕೊಂಡವರೇ ಸಂಗಪ್ಪ..
ಕಷ್ಟವನ್ನು ಹಾಸಿಕೊಂಡು.. ಬಡತವನ್ನು ಹೊದ್ದು ಕೊಂಡು.. ಉಪವಾಸ ವಿದ್ದು ಕೊಂಡು.. ದೊಡ್ಡ ಕನಸನ್ನು ಕಂಡು ಏರಿಕೊಂಡು.. ಹಂತ ಹಂತವಾಗಿ ಹತ್ತಿಕೊಂಡು.. ನಟನೆಯನ್ನು ಕಲಿತು ಕೊಂಡು.. ತುತ್ತು ಅನ್ನಕ್ಕಾಗಿ ನಾನಾ ವೇಷ ತೊಟ್ಟು ಕೊಂಡು.. ಜೀವನದ ಮಜಲುಗಳನ್ನು ಏರಿದ ಶ್ರಮ ಜೀವಿ ಸಂಗಪ್ಪ.

ಇವರದ್ದು ಜಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಪುಟ್ಟ ಗ್ರಾಮ ಅಂಜುಟಗಿ. ಈ ಗ್ರಾಮದಲ್ಲಿ ಬಡ ಲಿಂಗಾಯತ ಕುಟುಂಬದಲ್ಲಿ ಜನಿಸಿದ ಇವರ ತಂದೆ-ತಾಯಿ ಅನಕ್ಷರಸ್ತರು. ಮಕ್ಕಳು ತಮ್ಮಂತೆ ಆಗದಿರಲಿ ಎಂದು ಆಶಿಸಿದವರು. ಆದರೆ ವಿಧಿ ಇವರ ಬಾಳಿನಲ್ಲಿ ತುಂಬಾನೆ ಆಟವಾಡಿದೆ. ಇದ್ದ ಊರಿನಲ್ಲಿ ಕುಲಕಸಬು ನೇಕಾರಿಕೆ, ಬಿಟ್ಟು ಬೇರೆ ಊರಿಗೆ ಗೂಳೆ ಹೋಗಲು ತಯಾರಾದ್ರು. ಆದರೆ ಇವರು ಕುಟುಂಬಸ್ಥರು ಹೋಟೇಲ್ ಹಾಕಿಕೊಟ್ಟು ಸಹಾಯ ಮಾಡಿದರು. ಅಲ್ಲಿಯೂ ಸಂಗಪ್ಪ ಕುಟುಂಬಕ್ಕೆ ಲಾಭ ಮರಿಚೀಕೆ. ಹೆಗೋ ಜೀವನ ಸಾಗಿಸಿಕೊಂಡ ಇವರು ದಿನಂಪ್ರತಿ ೨೪ ಕಿಲೋ ಮಿಟರ್ ನಡೆದು ಹೋಗಿ ಬಳ್ಳೋಳ್ಳಿಯಲ್ಲಿ ವಿದ್ಯಾಭ್ಯಾಸ ಮಾಡಿದರು. ಇಲ್ಲಿಯೂ ಇವರು ಹೆಚ್ಚು ಅಂಕಗಳನ್ನು ಪಡೆದು ಗಮನ ಸೆಳೆದರು. ಇಲ್ಲಿಂದ ೧೦ನೇ ತರಗತಿಗೆ ಧಾರವಾಡಕ್ಕೆ ಬಂದರು. ವಿದ್ಯಾಕಾಶಿಯಲ್ಲಿ ಸಾಹಿತ್ಯ, ನಾಟಕ, ಪ್ರೀತಿ ಇವರನ್ನು ಅಪ್ಪಿಕೊಂಡಿತು. ತಮ್ಮ ಮನೆಯವರೆಲ್ಲಾ ಕೂಲಿ ಮಾಡಿ ನನ್ನ ಕಲಿಸುತ್ತಿದ್ದರು ಎಂದಾಗ ಅವರ ಕಣ್ಣಂಚಲಿ ನೀರು ತುಂಬಿತ್ತು.

ಮನೆಯಲ್ಲಿ ಕಿತ್ತು ತಿನ್ನುವ ಬಡತನ.. ಇವರಿಗೆ ಜ್ಞಾನದ ಹಸಿವು.. ಅನರಕ್ಷಸ್ತ ತಂದೆ ತಾಯಿ.. ಇವರು ಅಕ್ಷರಗಳ ಜೊತೆಗೆ ಆಡುವ ಕನಸು.. ಊಟಕ್ಕೂ ಗತಿ ಇಲ್ಲದಾಗಲೂ.. ಓದ ಬೇಕೆಂಬ ಛಲ.. ಹೋಟೇಲ್ ಕೆಲಸ.. ಮುಸುರೆ ತೆಗೆಯುವುದು.. ಪಾತ್ರೆ ತಿಕ್ಕುವುದು.. ಕಸ ಗುಡಿಸುವುದು.. ಇವರ ಜ್ಞಾನದ ಹಸಿವನ್ನು ಕಡಿಮೆ ಮಾಡಲು ಸಾಧ್ಯವೇ ಆಗಲಿಲ್ಲ. ತಾನು ಹಾಕಿಕೊಂಡ ಗುರಿಗೆ ಲಗಾಮು ಹಾಕಿ ಹೊರಟ ಇವರು ಇಂದು ಯುವ ಪೀಳಿಗೆಗೆ ಮಾದರಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲೇ ಫೇಲ್ ಎಂದು ಫಲಿತಾಂಶ ಬಂದಾಗಲೂ ಧೃತಿ ಗೆಡದೆ ಕಾನೂನಾತ್ಮಕ ಹೋರಾಟ ನಡೆಸಿ ಇಂದು ಕೆಎಎಸ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಸಂಗಪ್ಪ ಕಷ್ಟ ಪಟ್ಟು ಬಿಎ ಮುಗಿಸಿ ಬೆಂಗಳೂರಿನತ್ತ ಮುಖ ಮಾಡಿದರು. ರಾಜಧಾನಿಯಲ್ಲಿ ಬಂದಾಗ ಯಾರೂ ಗೊತ್ತಿಲ್ಲ.. ಆಶ್ರಮಗಳಲ್ಲಿ ಆಶ್ರಯ ಪಡೆದು ಇವರು, ನಂತರ ಧಾರವಾಡದ ಹಿತೈಶಿ ನೀಡಿದ ದೂರವಾಣಿಯ ನಂಬರ್ ಸಹಾಯದಿಂದ ಇನ್ನೊಂದು ಹಂತದ ಬದುಕು ಕಟ್ಟಿಕೊಂಡರು. ಅಲ್ಲಿ ಇವರ ಪ್ರತಿಭೆಗೆ ಬೆಲೆ ಸಿಕ್ಕಿತು. ಧಾರಾವಾಹಿಗಳಲ್ಲಿ ನಟನೆಗೆ ಅವಕಾಶ ಸಿಕ್ಕಿತು. ಇವರ ಆ ಪಾತ್ರಕ್ಕೆ ಜೀವ ತುಂಬಿದ ಪರಿಗೆ ಕರ್ನಾಟಕ ಮೆಚ್ಚಿಕೊಂಡಿತು.

ಅಲ್ಲದೆ ಕಷ್ಟದ ನಡುವೆ ಸಂಗಪ್ಪ ಅವರು ಎಂಎ ಶುರುಮಾಡಿದರು. ಆಗ ಅವರಿಗೆ ಬೆಂಗಳೂರಿನಲ್ಲಿ ಉಚಿತವಾಗಿ ವಸತಿ ಹಾಗೂ ಊಟದ ವ್ಯವಸ್ಥೆಯ ಅವಾಕಶ ಸಿಕ್ಕಿತು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂಬ ಹಠ ತೊಟ್ಟು ಕೆಎಎಸ್ ಬರೆದರು. ಆದರೆ ಕೆಎ.ಎಸ್. ಇಂಗ್ಲೀಷ್‌ನಲ್ಲಿ ಫೇಲ್ ಎಂಬ ಫಲಿತಾಂಶ ಬಂದಿತು. ಎದೆಗುಂದದೆ ಇವರು ಕಾನೂನಾತ್ಮಕ ಹೋರಾಟ ನಡೆಸಿ ಜಯ ಸಾಧಿಸಿದರು.

ಬಡ ವಿದ್ಯಾರ್ಥಿಗಳಿಗೆ ಇವರು ನಡೆದು ಬಂದ ದಾರಿ ನಿಜಕ್ಕೂ ಮಾದರಿ. ಧಾರವಾಹಿಯಲ್ಲಿ ನಗಿಸುವ ಪಾತ್ರ ಮಾಡಿ ಮನಗೆದ್ದಿದ್ದ ಸಂಗಪ್ಪ ನಿಜ ಜೀವನದಲ್ಲೂ  ಮೆಚ್ಚಿಕೊಳುವಂತಹ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.

Leave a Comment