ಸಿಲುಕಿಬಿದ್ದಿರುವ ಕಾರ್ಮಿಕರು ಮುಂಬೈನಿಂದ ಉತ್ತರ ಪ್ರದೇಶಕ್ಕೆ ಪ್ರಯಾಣಿಸಲು ಅಮಿತಾಬ್ ಬಚ್ಚನ್ ಸಹಾಯಹಸ್ತ

ಲಕ್ನೋ, ಜೂನ್ 11 – ಮುಂಬೈನಲ್ಲಿ ಸಿಲುಕಿರುವ 180 ಕ್ಕೂ ಹೆಚ್ಚು ವಲಸಿಗರನ್ನು ಉತ್ತರ ಪ್ರದೇಶದ ತಮ್ಮ ಮನೆಗಳಿಗೆ ತಲುಪಿಸಲು ವಿಶೇಷ ವಿಮಾನ ವ್ಯವಸ್ಥೆ ಮಾಡುವ ಮೂಲಕ ಬಾಲಿವುಡ್‌ ‘ಬಿಗ್ ಬಿ’ ಅಮಿತಾಬ್ ಬಚ್ಚನ್ ತಮ್ಮ ಸಹಾಯವನ್ನು ಮುಂದುವರೆಸಿದ್ದಾರೆ.

ಹಾಜಿ ಅಲಿ ಟ್ರಸ್ಟ್ ಮತ್ತು ಪಿರ್ ಮಖ್ದಮ್ ಟ್ರಸ್ಟ್ ಮೂಲಕ ಈ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಗುರುವಾರ 180 ಜನರನ್ನು ಹೊತ್ತ ಒಂದು ವಿಮಾನ ಲಖನೌದ ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ವಿಮಾನ ನಿಲ್ದಾಣಕ್ಕೆ ಬಂದಿಳಿದ ಜನರು ರಾಜ್ಯದ ವಿವಿಧ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಎಲ್ಲರೂ ಬಚ್ಚನ್ ಅವರ ಸಹಾಯಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದು, ಬಚ್ಚನ್‍ ಅವರು ತಮ್ಮ ಸ್ವಂತ ಖರ್ಚಿನಲ್ಲಿ ವಿಮಾನವನ್ನು ಕಾಯ್ದಿರಿಸಿದ್ದಾರೆ ಎಂದು ಹೇಳಿದ್ದಾರೆ.

ಈ ಹಿಂದೆ ಬಾಲಿವುಡ್ ಸೂಪರ್‌ಸ್ಟಾರ್ ಬಚ್ಚನ್‍ ಬುಧವಾರ ಬುಕ್ ಮಾಡಿದ್ದ ವಿಮಾನದ ಮೂಲಕ ವಲಸಿಗರು ವಾರಾಣಸಿ ಮತ್ತು ಗೋರಖ್‌ಪುರಕ್ಕೆ ಬಂದಿಳಿದಿದ್ದರು. 348 ಜನರನ್ನು ಹೊತ್ತ ಎರಡು ವಿಮಾನಗಳು ವಾರಾಣಸಿಯಲ್ಲಿ ಇಳಿದಿದ್ದರೆ, 187 ಪ್ರಯಾಣಿಕರನ್ನು ಹೊತ್ತ ವಿಮಾನ ಗೋರಖ್‌ಪುರಕ್ಕೆ ಬಂದಿಳಿದಿತ್ತು.
ಇದಲ್ಲದೆ ಕೆಲ ವಾರಗಳ ಹಿಂದೆ ಅಮಿತಾಬ್‍ ಬಚನ್‍ ಅವರು ಮುಂಬೈನಿಂದ ವಲಸೆ ಕಾರ್ಮಿಕರಿಗೆ ಉತ್ತರ ಪ್ರದೇಶದ ತಮ್ಮ ಊರುಗಳನ್ನು ತಲುಪಲು ಬಸ್‍ಗಳ ವ್ಯವಸ್ಥೆಯನ್ನೂ ಮಾಡಿದ್ದರು.

Share

Leave a Comment