ಸಿಲಿಕಾನ್ ಸಿಟಿಗೆ ಕಾಲಿಟ್ಟ ತಾಯಿ ಎದೆಹಾಲು ಬ್ಯಾಂಕ್

ಬೆಂಗಳೂರು, ಅ. ೯- ತಾಯಿ ಎದೆ ಹಾಲಿಗಾಗಿ ಈ ಹಿಂದೆ ಚೀನಾದಲ್ಲಿ ಭಾರಿ ಬೇಡಿಕೆ ಕಂಡು ಬಂದಿತ್ತು. ಇದೀಗ ಸಿಲಿಕಾನ್ ಸಿಟಿಯಲ್ಲೂ ಈ ಉದ್ಯಮ ಕಾಲಿಡುತ್ತಿದೆ.

ಇಷ್ಟು ದಿನ ಬ್ಲಡ್ ಬ್ಯಾಂಕ್, ಐ ಬ್ಯಾಂಕ್, ಸ್ಕಿನ್ ಬ್ಯಾಂಕ್ ಎಂದು ಕೇಳುತ್ತಿದ್ದ ಜನರಿಗೆ ರಾಜ್ಯದಲ್ಲಿ  ಇದೆ ಮೊದಲ ಬಾರಿಗೆ ಕಾಲಿಡುತ್ತಿರುವ ಈ ಎದೆಹಾಲು ಬ್ಯಾಂಕ್ ಬಗ್ಗೆ   ಕೇಳಿ ಕೊಂಚ ಅಚ್ಚರಿಯಾಗಬಹುದು. ನವಜಾತ ಶಿಶುಗಳ ಹಸಿವು ನೀಗಿಸಲು ನಗರದಲ್ಲಿ ತಾಯಿಯ ಎದೆ ಹಾಲು ಬ್ಯಾಂಕ್ ಆರಂಭಗೊಳ್ಳುತ್ತಿದೆ. ಫೋರ್ಟಿಸ್ ಆಸ್ಪತ್ರೆಯ ಫೋರ್ಟಿಸ್ ಲಾ ಫೆಮ್ಮೆ ಎದೆಹಾಲು ಫೌಂಡೇಷನ್ ಸಹಯೋಗದಲ್ಲಿ ಮೊದಲ ಸಾರ್ವಜನಿಕ ತಾಯಿ ಎದೆಹಾಲು ಬ್ಯಾಂಕ್ ಅನ್ನು ಆರಂಭಿಸುತ್ತಿದೆ. ನಾಳೆಯಿಂದ ಅಧಿಕೃತವಾಗಿ ನೂತನ ತಾಯಿ ಎದೆಹಾಲಿನ ಬ್ಯಾಂಕ್ ಕಾರ್ಯಾರಂಭ ಮಾಡಲಿದೆ. ಈಗಾಗಲೇ ರಾಜಸ್ತಾನ, ಕೋಲ್ಕತ್ತಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂತಹ ಎದೆಹಾಲು ಬ್ಯಾಂಕ್‌ಗಳು ಇದ್ದರೂ ಇದು ರಾಜ್ಯದಲ್ಲಿ ಆರಂಭವಾಗುತ್ತಿರುವ ಮೊದಲ ಮಿಲ್ಕ್ ಬ್ಯಾಂಕ್ ಆಗಿದ್ದು, ಅಮಾರ ಹೆಸರಿನಲ್ಲಿ ಮಿಲ್ಕ್ ಬ್ಯಾಂಕ್ ಆರಂಭಿಸಲಾಗುತ್ತಿದೆ.

ಪ್ರತಿಯೊಂದು ಜನಜಾತ ಶಿಶುವಿಗೂ ಆರೋಗ್ಯ ಪೂರ್ಣ ಬೆಳವಣಿಗೆಗೆ ತಾಯಿಯ ಎದೆಹಾಲು ಅಗತ್ಯ, ಆದರೆ ಹೆರಿಗೆ ಬಳಿಕ ತಾಯಿ ಮೃತಪಟ್ಟು ಮಗು ಉಳಿದರೆ,  ತಾಯಿ ಅನಾರೋಗ್ಯಕ್ಕೆ ತುತ್ತಾದರೆ , ತಾಯಂದಿರಲ್ಲಿ ಎದೆ ಹಾಲಿನ ಕೊರತೆಯಿಂದ ಅಂತಹ ಶಿಶು ತಾಯಿಯ ಎದೆಹಾಲು ಸೌಲಭ್ಯದಿಂದ ವಂಚಿತವಾಗುತ್ತದೆ. ಪೌಡರ್ ಅನ್ನು ಹಾಲಿನ ರೂಪಕ್ಕೆ ಪರಿವರ್ತಿಸಿ ಕೊಡಬೇಕಾಗಲಿದೆ. ಇದು ಕೆಲ ಶಿಶುಗಳಿಗೆ ಅಲರ್ಜಿಯನ್ನುಂಟು ಮಾಡುತ್ತದೆ. ಈ ರೀತಿ ತೊಂದರೆಗೆ ಸಿಲುಕುವ ಅಥವಾ ತಾಯಿ ಎದೆಹಾಲಿನಿಂದ ವಂಚಿತಗೊಳ್ಳುವ ಮಕ್ಕಳಿಗೆ ಈ ಮಿಲ್ಕ್ ಬ್ಯಾಂಕ್‌ನಿಂದ ಉಪಯೋಗವಾಗಲಿದೆ.

ಹಾಲಿನ ಸಂಗ್ರಹ ಹೇಗೆ?

ಎದೆಹಾಲು ದಾನ ಮಾಡುವವರಿಂದ ನೇರವಾಗಿ ಹಾಲು ಸಂಗ್ರಹ ಮಾಡುವುದಿಲ್ಲ. ಮೊದಲು ಅವರ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗುತ್ತದೆ. ಅವರಿಗೆ ಜ್ವರ ಇತ್ಯಾದಿ ವೈರಾಣು ಕಾಯಿಲೆ ಇರುವ ಕುರಿತು ಪರೀಕ್ಷೆ, ಹೆಚ್.ಐ.ವಿ.ಪರೀಕ್ಷೆ, ಆಲ್ಕೋಹಾಲ್ ಅಥವಾ ನಶೆ ಬರುವ ವಸ್ತುಗಳ ಸೇವನೆ ಕುರಿತು ಪರೀಕ್ಷೆ ನಡೆಸಲಾಗುತ್ತದೆ. ನಂತರ ಆ ತಾಯಿಯ ಮಗುವಿಗೆ ಹಾಲು ಕುಡಿಸಲು ಹೇಳಲಾಗುತ್ತದೆ. ಶಿಶು ಹಾಲು ಕುಡಿದು ಮುಗಿಸಿದ ಬಳಿಕ ಬ್ರೆಸ್ಟ್ ಪಂಪ್ ಮೂಲಕ ಉಳಿದ ಹಾಲನ್ನು ತೆಗೆಯಲಾಗುತ್ತದೆ. ರಕ್ತದ ಮಾದರಿ ವರದಿ ಬರುವವರೆಗೂ -೫ ಡಿಗ್ರಿಯಲ್ಲಿ ಈ ಎದೆ ಹಾಲು ಸಂಗ್ರಹಿಸಿಡಲಾಗುತ್ತದೆ. ನಂತರ ಪಾಶ್ಚರೀಕರಿಸಿ, ೩೦ ಎಂಎಲ್ನ ಯೂನಿಟ್ ಪ್ಯಾಕ್ ಮಾಡಲಾಗುತ್ತದೆ. ಮೈಕ್ರೋ ಬಯಾಲಜಿ ಲ್ಯಾಬ್ ಟೆಸ್ಟ್ ವರದಿ ಬರುವವರೆಗೂ -೨೦ ಡಿಗ್ರಿಯಲ್ಲಿ ಸಂಗ್ರಹಿಸಿ ನಂತರವೇ ವಿತರಣೆ ಮಾಡಲಾಗುತ್ತದೆ. ೩ ತಿಂಗಳವರೆಗೂ ಈ ಹಾಲವನ್ನು ಇಡಬಹುದಾಗಿದೆ.

ಹಾಲು ದಾನಕ್ಕೆ ಪ್ರೋತ್ಸಾಹ

ಪ್ರತಿಯೊಬ್ಬ ಆರೋಗ್ಯವಂತ ತಾಯಿಯಲ್ಲಿ ತನ್ನ ಮಗುವಿಗೆ ಎದೆಹಾಲು ಉಣಿಸಿ ಇನ್ನೂ ಮೂರು ಮಕ್ಕಳಿಗೆ ಹಾಲು ನೀಡುವಷ್ಟು ಹಾಲು ಉತ್ಪತ್ತಿಯಾಗುತ್ತದೆ. ಹಾಲು ದಾನ ಮಾಡುವುದರಿಂದ ಆ ತಾಯಿಯ ಮಗುವಿಗೆ ಹಾಲಿನ ಕೊರತೆ ಸೃಷ್ಠಿಯಾಗುವುದಿಲ್ಲ. ಅಲ್ಲದೇ ಹಾಲು ಖಾಲಿಯಾದಷ್ಟು ಉತ್ಪತ್ತಿಯಾಗುತ್ತಲೇ ಇರುತ್ತದೆ. ಈ ಬಗ್ಗೆ ತಾಯಿಯಂದಿರಲ್ಲಿ ಜಾಗೃತಿ ಮೂಡಿಸುವ ಮೂಲಕ ತಾಯಿ ಎದೆಹಾಲು ದಾನಕ್ಕೆ ಪ್ರೋತ್ಸಾಹ ನೀಡಬೇಕಾಗಲಿದೆ.

Leave a Comment