ಸಿಬಿಎಸ್‌ಇ ಪರೀಕ್ಷಾ ಶುಲ್ಕ ಏರಿಕೆ ಸಿಪಿಐ ವಿರೋಧ

ಪಟ್ನ, ಆ ೧೪- ಸಿಬಿಎಸ್‌ಇ ೧೦ ಮತ್ತು ೧೨ನೇ ತರಗತಿಗಳ ಪರೀಕ್ಷಾ ಶುಲ್ಕಗಳನ್ನು ನರೇಂದ್ರ ಮೋದಿಯವರ ಸರ್ಕಾರ ತೀವ್ರವಾಗಿ ಏರಿಸಿರುವುದನ್ನು ಸಿಪಿಐ (ಎಂ.ಎಲ್) ಖಂಡಿಸಿದ್ದು ಏರಿಕೆಯನ್ನು ಕೂಡಲೇ ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದೆ.
“ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕವನ್ನು ದುಪ್ಪಟ್ಟು ಮಾಡಿದ್ದು ಪರಿಶಿಷ್ಟ ಜಾತಿ/ವರ್ಗದ ವಿದ್ಯಾರ್ಥಿಗಳಿಗೆ ೨೪ ರಷ್ಟು ಹೆಚ್ಚು ಮಾಡಿರುವುದರಿಂದಾಗಿ ಶಿಕ್ಷಣ ಮತ್ತು ಉದ್ಯೋಗವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವುದು ಸರ್ಕಾರದ ಉದ್ದೇಶವೆಂಬುದು ಸ್ಪಷ್ಟವಾಗಿದೆ” ಎಂದಿದೆ
“ಶೋಷಿತ ವರ್ಗಗಳಿಗೆ ಪೆಟ್ಟು ನೀಡುವುದೇ ಸರ್ಕಾರದ ಆದ್ಯತೆಯಾಗಿದೆ. ಆಡಳಿತ ದಲಿತರ ಪರ ಎಂದು ಹೇಳಿಕೊಳ್ಳುತ್ತಿದೆ, ಆದರೆ ಸಮಾಜದ ದುರ್ಬಲ ವರ್ಗವನ್ನು ಉತ್ತಮ ಶಿಕ್ಷಣದಿಂದ ವಂಚಿಸುತ್ತಿದೆ” ಎಂದು ಸಿಪಿಐ (ಎಂಎಲ್) ತನ್ನ ರಾಜ್ಯ ಮಟ್ಟದ ಸಭೆಯ ಮೊದಲ ದಿನದ ನಂತರ ಹೇಳಿದೆ.
ಶುಲ್ಕ ಏರಿಕೆಯನ್ನು ಕೂಡಲೆ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿರುವ ಪಕ್ಷ ರಾಜ್ಯಾದ್ಯಂತ ಚಳವಳಿ ನಡೆಸಿ ತನ್ನ ಬೇಡಿಕೆಯನ್ನು ಆಗ್ರಹಿಸಲೂ ನಿರ್ಧರಿಸಿದೆ. ಸಿಬಿಎಸ್‌ಇ ೧೦ ಮತ್ತು ೧೨ನೇ ತರಗತಿಗಳ ಪರೀಕ್ಷಾ ಶುಲ್ಕವನ್ನು ಸಾಮಾನ್ಯ ವರ್ಗದವರಿಗೆ ೭೫೦ ರೂ. ಗಳಿಂದ ೧೫೦೦ ರೂ.ಗಳಿಗೆ ಏರಿಸಿದೆ.
ಪರಿಶಿಷ್ಟ ಜಾತಿ/ ವರ್ಗದ ವಿದ್ಯಾರ್ಥಿಗಳಿಗೆ ಈ ಹಿಂದೆ ಇದ್ದ ೩೯೦ ರೂ.ಗಳನ್ನು ಐದು ವಿಷಯಗಳಿಗೆ ೧,೨೦೦ ಕ್ಕೆ ಏರಿಸಲಾಗಿದೆ.
ಸರ್ಕಾರದ ಈ ಪ್ರಜಾಪ್ರಭುತ್ವ ವಿರೋಧಿ ಕ್ರಮದಿಂದಾಗಿ ಜಮ್ಮು-ಕಾಶ್ಮೀರದ ಯಾರೊಬ್ಬರಿಗೂ ಪ್ರಯೋಜನವಾಗದು ಇದು ತುಳಿತದ ಹೊಸ ಅಧ್ಯಾಯವನ್ನು ತೆರೆಯುತ್ತದೆ ಎಂದೂ ಸಿಪಿಐ (ಎಂ.ಎಲ್) ಹೇಳಿದೆ.

Leave a Comment