ಸಿಪಿಐ ಪಕ್ಷದ ಕಾಲ್ನಡಿಗೆ ಜನಾಂದೋಲ ಜಾಥ ಸಮಾರೋಪ

ಹರಪನಹಳ್ಳಿ.ಸೆ.9; ತಾಲೂಕಿನಲ್ಲಿ ನಡೆದ ಕಾಲ್ನಡಿಗೆ ಜಾಥ ಸಂದರ್ಭದಲ್ಲಿ ಅನೇಕ ಹಳ್ಳಿಗಳ ಸಮಸ್ಯೆಗಳ ಪಟ್ಟಿ ಮಾಡಲಾಗಿದೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ತಾಲೂಕಿನ ಸ್ಥಿತಿಗತಿಗಳ ಬಗ್ಗೆ ಗಮನಕ್ಕೆ ತಂದು ಪರಿಹಾರ ಮಾಡುವಂತೆ ಒತ್ತಾಯಿಸಲಾಗುವುದು ಎಂದು ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಸಾಥಿ ಸುಂದರೇಶ್ ತಿಳಿಸಿದರು. ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಸಿಪಿಐ ಪಕ್ಷ ಹಮ್ಮಿಕೊಂಡಿದ್ದ ನಮ್ಮ ತಾಲೂಕು, ನಮ್ಮ ಜನ, ನಮ್ಮ ಅಭಿವೃದ್ದಿ ಜಾಥ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ಪ್ರತಿ ತಾಲೂಕಿನಲ್ಲಿಯೂ ಹಲುವು ಜ್ವಲಂತ ಸಮಸ್ಯೆಗಳಿವೆ. ಅವುಗಳನ್ನು ಪಟ್ಟಿ ಮಾಡಿ ಸಿಪಿಐ ಪಕ್ಷದಿಂದ ಹೋರಾಟ ಮಾಡಲು ನಿರ್ಧರಿಸಲಾಗಿದೆ. ಜನಪರ ಹೋರಾಟಗಳನ್ನು ಬೆಂಬಲಿಸದ ಜನಪ್ರತಿನಿಧಿಗಳಿಗೆ ಪಾಠ ಕಲಿಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯ ಶಕ್ತಿ ಪ್ರದರ್ಶನ ಮಾಡಬೇಕಿದೆ ಎಂದರು.
ಎಐವೈಎಫ್ ರಾಜ್ಯ ಕಾರ್ಯದರ್ಶಿ ಎ.ಎಸ್.ಮೋನಪ್ಪ ಮಾತನಾಡಿ, ಹರಪನಹಳ್ಳಿ ಹಿಂದುಳಿದ ತಾಲೂಕು ಆಗಿದ್ದರೂ ಶೈಕ್ಷಣಿಕವಾಗಿ ರಾಜ್ಯದಲ್ಲಿಯೇ ಹೆಸರು ಮಾಡಿದೆ. ಅನೇಕ ಜಿಲ್ಲೆ ಮತ್ತು ತಾಲೂಕುಗಳಿಂದ ಇಲ್ಲಿಗೆ ಅಭ್ಯಾಸಕ್ಕಾಗಿ ಆಗಮಿಸುತ್ತಿದ್ದಾರೆ. ಹಾಗಾಗಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ರಾಷ್ಟ್ರೀಯ ಮಹಿಳಾ ಒಕ್ಕೂಟದ ರಾಜ್ಯಧ್ಯಕ್ಷೆ ಎ.ಜ್ಯೋತಿ ಮಾತನಾಡಿ, ಮನೆ ಕೆಲಸದಿಂದ ಹಿಡಿದು ದೇಶವನ್ನು ಅಳುವವರೆಗೆ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರಿದ್ದರೂ ದೌರ್ಜನ್ಯ ಮಾತ್ರ ನಿಂತಿಲ್ಲ. ಉದ್ಯೋಗ ಮಾಡುವ ಸ್ಥಳದಿಂದ ಹಿಡಿದು ಎಲ್ಲೆಡೆ ಮಹಿಳೆಯರ ಮೇಲೆ ದೌರ್ಜನ್ಯ ದಿನನಿತ್ಯ ನಡೆಯುತ್ತಲೇ ಇವೆ, ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಸಭೆಯಲ್ಲಿ ತುಂಗಭದ್ರ ನದಿಯಿಂದ 60 ಕೆರೆಗಳಿಗೆ ನೀರು ತುಂಬಿಸುವ ಹಾಗೂ ಬಿಡ್ಜ್ ಕಂ ಬ್ಯಾರೇಜ್ ಯೋಜನೆ ಕಾಮಗಾರಿ ಶೀಘ್ರವೇ ಪ್ರಾರಂಭಿಸಬೇಕು. ಶುದ್ದ ಕುಡಿಯುವ ನೀರು, ಸಾರ್ವಜನಿಕ ಆಸ್ಪತ್ರೆ ಹಾಗೂ ಸರ್ಕಾರಿಗಳ ಸಬಲೀಕರಣ, ಭೂಹೀನ ಕುಟುಂಬಗಳಿಗೆ ಭೂಮಿ ಹಂಚಿಕೆ ಸೇರಿದಂತೆ ಒಟ್ಟು 23 ಅಂಶಗಳ ಒತ್ತಾಯಕ್ಕೆ ನಿರ್ಣಯ ಕೈಗೊಳ್ಳಲಾಯಿತು.
ರಾಜ್ಯ ಸಮಿತಿ ಸದಸ್ಯ ಕೆ.ಎಸ್.ಹಡಗಲಿಮಠ್, ಹೊಸಳ್ಳಿ ಮಲ್ಲೇಶ್, ಸಿಪಿಐ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್, ಸಹ ಕಾರ್ಯದರ್ಶಿ ಎಚ್.ಎಂ.ಸಂತೋಷ್ ಷಣ್ಮುಖಸ್ವಾಮಿ, ರಮೇಶನಾಯ್ಕ, ಚಂದ್ರನಾಯ್ಕ, ಪ್ರಸನ್ನ, ಮಾದಿಹಳ್ಳಿ ಮಂಜಪ್ಪ, ಕಡಬಗೆರೆ ಭರತ್, ಕೋಟ್ರಯ್ಯ, ಬಸವರಾಜ್ ಮತ್ತಿತರರಿದ್ದರು.

Leave a Comment