ಸಿಪಿಐ(ಎಂ)ನಿಂದ ಸೆ. 10 ರಂದು ಬೃಹತ್ ಪ್ರತಿಭಟನೆ

ಹೊಸಪೇಟೆ, ಸೆ.8: ದೇಶಾದ್ಯಂತ ಬೆಲೆ ಏರಿಕೆ ವಿರುದ್ಧ ಸಿಪಿಐ(ಎಂ)ವತಿಯಿಂದ ಸೆ. 10 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಆರ್.ಎಸ್. ಬಸವರಾಜ್ ತಿಳಿಸಿದರು.

ನಗರದ ದಲಿತ ಹಕ್ಕುಗಳ ಸಮಿತಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಜನವಿರೋಧಿ ನೀತಿಯಿಂದ ಜನರು ತತ್ತರಿಸಿಹೋಗಿದ್ದಾರೆ. ಬೆಲೆ ಏರಿಕೆಯಿಂದ ರೋಸಿಹೋಗಿದ್ದಾರೆ ಎಂದು ದೂರಿದರು.

ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಕೇಂದ್ರ ಸರಕಾರದ ಪ್ರತಿಕೃತಿದಹಿಸಿ ಪ್ರತಿಭಟನೆ ಮಾಡಲಾಗುವುದು. ಕಾಂಗ್ರೆಸ್ ಸರಕಾರ ಕರೆ ನೀಡಿರುವ ಭಾರತ್ ಬಂದ್ ಗೆ ವಿರೋಧವಿಲ್ಲ. ಕಾಂಗ್ರೆಸ್ ರವರು ಬಂದ್ ಕರೆ ನೀಡಿರುವುದು ಉತ್ತಮ ಬೆಳವಣಿಗೆ. ಅವರು ಕರೆ ನೀಡಿರುವ ಬಂದ್ ಅಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮರಡಿ ಜಂಬಯ್ಯ ನಾಯಕ್, ಕೆ. ನಾಗ ರತ್ನಮ್ಮ, ಭಾಸ್ಕರ್ ರೆಡ್ಡಿ, ತಾಲೂಕು ಕಾರ್ಯದರ್ಶಿ ಕರುಣಾನಿಧಿ, ಮುಖಂಡರಾದ ಎಂ. ಗೋಪಾಲ್, ಯಲ್ಲಾಲಿಂಗ ಇದ್ದರು.

Leave a Comment