ಸಿನಿಮೀಯ ರೀತಿಯಲ್ಲಿ ಗುತ್ತಿಗೆದಾರನ ಕೊಲೆ : ಐವರು ಆರೋಪಿಗಳ ಸೆರೆ

 

ಕಲಬುರಗಿ,ನ.13-ನಗರ ಹೊರವಲಯದ ಶರಣಸಿರಸಗಿ ಹತ್ತಿರ ಈಚೆಗೆ ಸಿನಿಮೀಯ ರೀತಿಯಲ್ಲಿ ಗುತ್ತಿಗೆದಾರನ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜೇವರ್ಗಿ ತಾಲ್ಲೂಕಿನ ಮಯೂರ ಗ್ರಾಮದ ರವಿ ಶಂಕ್ರೆಪ್ಪ ಹೊಸಮನಿ (24), ರಾಜು ಅಲಿಯಾಸ್ ರಾಜಕುಮಾರ ಶರಣಪ್ಪ ಮಯೂರ (27), ರೋಹಿತ್ ಸೋಮರಾಯ ಹೊಸಮನಿ (20), ಲೋಹಿತ ಸೋಮರಾಯ ಹೊಸಮನಿ (220 ಮತ್ತು ಗೋವಿಂದ ನಿಂಗಪ್ಪ ಕಾಂಬಳೆ (19) ಎಂಬುವವರನ್ನು ಬಂಧಿಸಿ ಕೊಲೆಗೆ ಉಪಯೋಗಿಸಿದ ಮಾರಕಾಸ್ತ್ರ, ವಾಹನ ಮತ್ತು ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಜೇವರ್ಗಿ ತಾಲ್ಲೂಕಿನ ಮಯೂರ ಗ್ರಾಮದ ಶಿವಲಿಂಗ ಗೊಲ್ಲಾಳಪ್ಪ ಭಾವಿಕಟ್ಟಿ (46) ಅವರು ತಮ್ಮ ಸಹೋದರ ಮಹಾಂತಪ್ಪ ಭಾವಿಕಟ್ಟಿ ಜೊತೆಗೆ ಕಲಬುರಗಿಯಿಂದ ಚವಡಾಪೂರಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ಶರಣಸಿಸರಗಿ ಹತ್ತಿರ ಸಿನೀಮಿಯ ರೀತಿಯಲ್ಲಿ ಕಾರಿಗೆ ಕಾರು ಡಿಕ್ಕಿ ಹೊಡಿಸಿ ರಸ್ತೆ ಪಕ್ಕದಲ್ಲಿ ಕೆಡುವಿ ಶಿವಲಿಂಗ ಭಾವಿಕಟ್ಟಿ ಅವರನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು.

ಈ ವೇಳೆ ಮಹಾಂತಪ್ಪ ಭಾವಿಕಟ್ಟಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಶಾಂತಪ್ಪ ಕೂಡಲಗಿ, ಹಣಮಂತ ಕೂಡಲಗಿ, ರವಿ ಹೊಸಮನಿ, ರಾಜು ಹೊಸಮನಿ, ಖಾಜಪ್ಪ, ಪ್ರಕಾಶ ಸೇರಿದಂತೆ ಮತ್ತಿತರರ ವಿರುದ್ಧ ಫರತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ಈ ದೂರಿನ ಅನ್ವಯ ನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ, ಪೊಲೀಸ್ ಉಪ ಆಯುಕ್ತ ಡಿ.ಕಿಶೋರ ಬಾಬು ಅವರು ಆರೋಪಿಗಳ ಪತ್ತೆಗಾಗಿ ಸಿ.ಸಿ.ಆರ್.ಬಿ.ಘಟಕದ ಸಹಾಯಕ ಪೊಲೀಸ್ ಆಯುಕ್ತ ಗಂಗಾಧರ, ಸಿ ಉಪ ವಿಭಾಗದ ಎಸಿಪಿ ಎಸ್.ಎಚ್.ಸುಭೇದಾರ ನೇತೃತ್ವದಲ್ಲಿ ಫರತಾಬಾದ ಪೊಲೀಸ್ ಠಾಣೆ ಪಿಐ ಎಂ.ಬಿ.ಚಿಕ್ಕಣ್ಣನವರ, ಸಿ.ಸಿ.ಆರ್.ಬಿ.ಘಟಕದ ಪಿಐ ವಾಜೇದ್ ಪಟೇಲ್, ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪಿಐ ಸಂಗಮನಾಥ ಹಿರೇಮಠ, ಗ್ರಾಮೀಣ ಪೊಲೀಸ್ ಠಾಣೆ ಪಿಐ ಸೋಮಲಿಂಗ ಕಿರದಳ್ಳಿ, ಸಿಸಿಬಿ ಘಟಕದ ಪಿಎಸ್ಐ ವಾಹಿದ್ ಕೊತ್ವಾಲ್, ಫರತಾಬಾದ ಪಿಎಸ್ಐ ಸುರೇಶಕುಮಾರ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಿದ್ದರು.

ಈ ತಂಡ ತನಿಖೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದೆ.

 

 

Leave a Comment