ಸಿನಿಮಾ ಶೈಲಿಯಲ್ಲಿ ಕಾರು ಕಳ್ಳತನ, ಇಬ್ಬರು ಕಾರುಗಳ್ಳರ ಬಂಧನ, 8 ಕಾರು ವಶ!

ಬೆಂಗಳೂರು.ಫೆ.೧೯.ಸಿನಿಮಾ ಶೈಲಿಯಲ್ಲಿ ಕಾರು ಕಳವು ಮಾಡಿ, ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ 8 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಯಲಹಂಕ ನ್ಯೂಟೌನ್ ಪೊಲೀಸರು ಖಲೀಲ್ ಉಲ್ಲಾ, ಅಕ್ಷಯ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ, 8 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಮೊದಲು ಕಾರು ಮಾಲೀಕರನ್ನು ಚೆನ್ನಾಗಿ ಪರಿಚಯಿಸಿಕೊಳ್ಳುತ್ತಿದ್ದರು. ನಂತರ ದಾಖಲೆ ನೀಡಿ ಕಾರನ್ನು ಬಾಡಿಗೆಗೆ ಪಡೆದುಕೊಳ್ಳುತ್ತಿದ್ದರು.

ಹೀಗೆ ಸುಮಾರು ಎರಡು, ಮೂರು ಬಾರಿ ಹೆಚ್ಚು ಹಣ ನೀಡಿ ಕಾರನ್ನು ಬಾಡಿಗೆಗೆ ಪಡೆದುಕೊಳ್ಳುತ್ತಿದ್ದರು. ಮಾಲೀಕರಿಗೆ ತೀರ ಹತ್ತಿರವಾದ ನಂತರ ದಾಖಲೆ ನೀಡದೇ, ಕಾರು ಬಾಡಿಗೆಗೆ ಪಡೆದು ಪರಾರಿಯಾಗುತ್ತಿದ್ದರು. ನಂತರ ಕದ್ದ ಕಾರನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯಗೌಡ್ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ನಿರಂಜನ್ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ತನಿಖೆ ವೇಳೆ ಆರೋಪಿಗಳು 10ಕಾರು ಕದ್ದಿರುವುದು ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment