ಸಿನಿಮಾದಿಂದ ಮನೋವಿಕಾಸ ಸಾಧ್ಯ

ತುಮಕೂರು, ಆ. ೧೩- ಸಿನಿಮಾದಿಂದ ಮಕ್ಕಳಲ್ಲಿ ಮನೋವಿಕಾಸ ಸಾಧ್ಯ ಎಂದು ಜಿಲ್ಲಾ ಬಾಲಭವನ ಸಂಘದ ಸದಸ್ಯ ಎಂ. ಬಸವಯ್ಯ ಅಭಿಪ್ರಾಯಪಟ್ಟರು.

ಇಲ್ಲಿನ ಬಾಲಭವನದಲ್ಲಿ ಜಿ.ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಂಘ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ `ವಾರಾಂತ್ಯ ಸಿನಿಮಾ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಾಲಭವನದ ಆಶ್ರಯದಲ್ಲಿ ಪ್ರತಿ ಶನಿವಾರ ಮಕ್ಕಳಿಗಾಗಿ ಸಿನಿಮಾ ಆಯೋಜಿಸುತ್ತಿದ್ದೇವೆ. ಇದನ್ನು ಮಕ್ಕಳು ಗಮನವಿಟ್ಟು ನೋಡಿದರೆ ಹೊಸ ಹೊಸ ಆಲೋಚನೆಗಳು ತೆರೆದುಕೊಳ್ಳುತ್ತದೆ ಎಂದರು.

ದೃಶ್ಯ ಮಾಧ್ಯಮಗಳು ಮಕ್ಕಳ ಮೇಲೆ ಬೀರುವ ಪರಿಣಾಮವೇ ಬೇರೆ. ಆದಷ್ಟು ಮಕ್ಕಳು ಇಂಟರ್‌ನೆಟ್, ಮೊಬೈಲ್‌ಗಳನ್ನು ಕಡಿಮೆ ಮಾಡಿ ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು ಮತ್ತು ಹೊಸ ಅಲೆಯ ಚಿತ್ರಗಳನ್ನು ನೋಡಬೇಕು ಎಂದು ಸಲಹೆ ನೀಡಿದರು.

ಬಾಲಭವನ ಮುಂದಿನ ದಿನಗಳಲ್ಲಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಮಕ್ಕಳ ನಾಟಕಗಳು, ನಾಟಕೋತ್ಸವಗಳನ್ನು ನಡೆಸುತ್ತೇವೆ. ಈ ಮೂಲಕ ಮಕ್ಕಳ ಜ್ಞಾನ ವಿಕಾಸಕ್ಕೆ ನೀರು ಹಾಕುವ ಕೆಲಸವನ್ನು ನಾವು ಮಾಡಲು ಸಿದ್ಧರಿದ್ದೇವೆ. ಮಕ್ಕಳ ಸಿನಿಮಾ ಆಯೋಜಿಸಲು ಹೊರಟಿರುವ ಬೆನ್ನಲ್ಲೇ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಹೊಸ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ತಿಳಿಸಿದರು.
ಸಿನಿಮಾ ವಿಮರ್ಶಕ ಮನು ಮಾತನಾಡಿ, ಕೇರಳದಲ್ಲಿ 900 ಕ್ಕೂ ಹೆಚ್ಚು ಸಿನಿಮಾ ಕ್ಲಬ್‌ಗಳಿವೆ. ಅಲ್ಲಿನ ಜನ ಸಿನಿಮಾ ನೋಡಿ ಅದರ ಬಗ್ಗೆ ಚರ್ಚೆ ನಡೆಸುತ್ತಾರೆ. ಹೀಗಾಗಿ ಕೇರಳ ರಾಜ್ಯ ಸಾಂಸ್ಕೃತಿಕವಾಗಿ ಸಮೃದ್ಧಿಯಾಗಿದೆ ಎಂದು ವಿಶ್ಲೇಷಿಸಿದರು. ಮಕ್ಕಳು ರಂಜನೆಗಾಗಿ ಸಿನಿಮಾ ನೋಡಬಾರದು. ಅದರಲ್ಲಿರುವ ಆಶಯಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಸದ್ಯ ಪ್ರಸ್ತುತ ಮಕ್ಕಳ ಬೆಳವಣಿಗೆಗೆ ಪೂರಕವಾದ ಚಿತ್ರಗಳನ್ನು ತೋರಿಸುತ್ತಿದ್ದೇವೆ. ಇದನ್ನು ಮಕ್ಕಳು ನೋಡಿ ಮಾನವೀಯ ಅಂಶಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.

ಝೆನ್ ಟೀಮ್ ಮುಖ್ಯಸ್ಥ ಹಾಗೂ ಪತ್ರಕರ್ತ ಉಗಮ ಶ್ರೀನಿವಾಸ್ ಮಾತನಾಡಿ, ವಾರಾಂತ್ಯದ ಸಿನಿಮಾ ಆಯೋಜಿಸುವ ಮೂಲಕ ಬಾಲಭವನ ಉತ್ತಮ ಕೆಲಸಕ್ಕೆ ನಾಂದಿ ಹಾಡಿದೆ. ಇದು ಆಂದೋಲನದ ಸ್ವರೂಪ ಪಡೆದುಕೊಳ್ಳಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್, ಮಮತಾ ಮತ್ತಿತರರು ಉಪಸ್ಥಿತರಿದ್ದರು.

Leave a Comment