ಸಿದ್ಧರಾಮೇಶ್ವರ ಆದರ್ಶ ಗುಣಗಾನ

ಬೆಂಗಳೂರು, ಜ.೧೪- ಜಾತಿ ಪದ್ಧತಿ, ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡಿದ ಸಿದ್ಧರಾಮೇಶ್ವರ ಅವರ ಆದರ್ಶಗಳು ಇಂದಿಗೂ ಅನುಕರಣೀಯ ಎಂದು ಶಿವಯೋಗಿ ಸಂಸ್ಥಾನ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನುಡಿದರು.
ನಗರದಲ್ಲಿಂದು ರವೀಂದ್ರ ಕಲಾಕ್ಷೇತ್ರ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಉದ್ಫಾಟಿಸಿ ಅವರು ಮಾತನಾಡಿದರು.
ಸಿದ್ಧರಾಮೇಶ್ವರರು ಬಹುಜನ ಹಿತಾಯ, ಬಹುಜನ ಸುಖಾಯ ಎಂಬಂತೆ ಬದುಕಿದವರು. ೧೨ನೇ ಶತಮಾನದಲ್ಲಿ ಬಸವಾದಿ ಶರಣರು ನುಡಿದಂತೆ ನಡೆದಿದ್ದಾರೆ. ಸ್ವಾರ್ಥ ತ್ಯಜಿಸುವಂತೆ ಸಾಕಷ್ಟು ವಚನಗಳನ್ನು ರಚಿಸಿದ್ದಾರೆ. ಅವುಗಳನ್ನು ಅರ್ಥೈಸಿಕೊಳ್ಳುವ ಕೆಲಸ ಇಂದಿನ ಯುವ ತಲೆಮಾರು ಮಾಡಬೇಕು ಎಂದರು.
ಬೋವಿ ಸಮಾಜದ ಕಾರ್ಯಾಧ್ಯಕ್ಷ ರವಿ ಮಾಕಳಿ ಮಾತನಾಡಿ, ರಾಜ್ಯ ಸರ್ಕಾರ ಬೋವಿ ಜನಾಂಗಕ್ಕೆ ಕೊಡಬೇಕಾದ ಸವಲತ್ತುಗಳನ್ನು ಕೊಟ್ಟಿಲ್ಲ. ಇದು ಬೋವಿ ಜನಾಂಗದ ದೌರ್ಭಾಗ್ಯವೇ ಸರಿಯೆಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಬೋವಿ ಸಮಾಜದ ಕೊಡುಗೆ ಅಪರಿಮಿತವಾಗಿದೆ. ಆದರೆ, ಸರಕಾರದ ಸವಲತ್ತುಗಳು ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ ಎಂದು ವಿಷಾದಿಸಿದರು.
ಸಾಹಿತಿ ಕರಿದುರುಗ ಮಾತನಾಡಿ, ದೆಹಲಿಯ ಸಂಸತ್, ಕೋಟೆಗಳನ್ನು, ಚರ್ಚ್, ಮಸೀದಿ, ದೇವಾಲಯ, ರಸ್ತೆಗಳನ್ನು ನಿರ್ಮಿಸಿದವರು ಭೋವಿ ಸಮುದಾಯವಾಗಿದೆ. ಹೀಗಾಗಿ ಸಮುದಾಯದ ಮುಕುಟ ಪ್ರಾಯವಾಗಿರುವ ಸಿದ್ದರಾಮೇಶ್ವರರ ಪ್ರತಿಮೆ ಸ್ಥಾಪನೆಯಾಗಿದೆ ಎಂದು ಒತ್ತಾಯಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರಂಗಪ್ಪ ಮಾತನಾಡಿ, ಶಿವಶರಣರು ತನ್ನ ಅನುಭವ, ಚಿಂತನೆಗಳನ್ನು ವಚನಗಳ ಮೂಲಕ ಜನತೆಯಲ್ಲಿ ವೈಜ್ಞಾನಿಕ ಮನೋಭವ ಮೂಡಿಸುವಲ್ಲಿ ಅವಿರತ ಶ್ರಮಿಸಿದ್ದರು ಎಂದರು.
ಶಿವಶರಣ ಸಿದ್ದರಾಮೇಶ್ವರ ಕೇವಲ ವಚನಗಳಿಗೆ ಸೀಮಿತವಾಗದೆ ಬಾವಿಗಳನ್ನು, ದಾಸೋಹಗಳನ್ನು ಏರ್ಪಡಿಸುವ ಮೂಲಕ ಜನಪರ ಕೆಲಸದಲ್ಲಿ ನಿರತರಾದವರೆಂದು ಅವರು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಇಲಾಖೆಯ ನಿರ್ದೇಶಕ ರಂಗಪ್ಪ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Leave a Comment