ಸಿದ್ದು ಸರ್ಕಾರದ ಆಡಳಿತ ವೈಫಲ್ಯ ಬಿಜೆಪಿಗೆ ವರದಾನ ರಾವ್ ವಿಶ್ಲೇಷಣೆ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಏ.೧೬- ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ವಿರೋಧಿ ಅಲೆ ಹಾಗೂ ಸರ್ಕಾರದ ವೈಫಲ್ಯಗಳೇ ಬಿಜೆಪಿಯ ಪ್ರಮುಖ ಚುನಾವಣಾ ವಿಷಯವಾಗಿದೆ.

ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ ಅಧಿಕಾರದ ಗದ್ದುಗೆಗೆ ಏರಲಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ನೋಡಿಕೊಳ್ಳುವ ಪಿ.ಮುರಳೀಧರ ರಾವ್ ಅವರು ಇಂದು ಇಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಪಕ್ಷವನ್ನು ಎದುರಿಸಲಾಗದೆ ಹತಾಶೆಯ ಹಂತವನ್ನು ತಲುಪಿದ್ದಾರೆ ಕಳೆದ 4 ವರೆ ವರ್ಷಗಳ ಬಳಿಕ ಅವರು ಕನ್ನಡ ಬಾವುಟ, ಲಿಂಗಾಯಿತ, ಮಹಾದಾಯಿ, ವಿಷಯಗಳನ್ನು ಮುಂದಿಟ್ಟುಕೊಂಡು ಮತ ಕೇಳಲು ಹೊರಟಿದ್ದಾರೆ. ಇದರ ಹಿಂದಿರುವ ರಾಜಕೀಯ ಕುತಂತ್ರ ರಾಜ್ಯದ ಜನತೆಯ ಮುಂದೆ ನಡೆಯುವುದಿಲ್ಲ ಎಂದು ತಿಳಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ಬೆಂಗಳೂರು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ವಿಭಾಗದ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಿದರೂ ಬಿಜೆಪಿ ಗೆಲುವಿಗೆ ಅಡ್ಡಿಯಾಗುವುದಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಈಗಲೂ ಬುದ್ದಿ ಬಂದಿಲ್ಲ. ಹಲವು ರಾಜ್ಯಗಳಲ್ಲಿ ಪದೇ ಪದೇ ಸೊಲ್ಲು ಅನುಭವಿಸಿದ್ದರೂ ಬಿಜೆಪಿ ವಿರುದ್ಧ ಎಂತಹ ಹೋರಾಟ ಮಾಡಬೇಕೆಂಬುದೇ ತಿಳಿಯುತ್ತಿಲ್ಲ.

ಪಿಎಫ್ಐ, ಎಸ್.ಡಿ.ಪಿ.ಐ. ಅಂತಹ ಕೋಮು ವಾದಿ ಸಂಘಟನೆಗಳ ಜೊತೆ ಕೈ ಜೋಡಿಸಿದ್ದಾರೆ. ಇದರ ಹಿಂದಿರುವ ರಾಜಕೀಯ ತಂತ್ರ ಜನರಿಗೂ ಅರ್ಥವಾಗಿದೆ. ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ 2 ಕ್ಷೇತ್ರಗಳಲ್ಲಿ ನಿಲ್ಲುವ ಆಲೋಚನೆ ಮಾಡಿದ್ದೇ ಅವರಲ್ಲಿ ಚುನಾವಣೆಯಲ್ಲಿ ಗೆಲ್ಲುವ ಆತ್ಮ ವಿಶ್ವಾಸದ ಕೊರತೆಯನ್ನು ತೋರಿಸಿದೆ ಎಂದ ಮುರಳೀಧರ ರಾವ್ ಅವರು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ದೇಶದ ನೈಜ ಪ್ರಜಾ ಪ್ರಭುತ್ವ ಪಕ್ಷವಾಗಿ ಹೋರ ಹೊಮ್ಮಲಿದೆ.
ರಾಜ್ಯದ ಚುನಾವಣೆ ನಿರ್ಣಾಯಕವಾಗಲಿದ್ದು, ದೇಶದಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ಗೆಲುವಿಗೆ ನಾಂದಿ ಹಾಡಲಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ ಮುರಳೀಧರ ರಾವ್ ಅವರು  ಯಡಿಯೂರಪ್ಪ ಅವರು ಸಮರ್ಥ ನಾಯಕರು. ಕೃಷಿ ಬಜೆಟ್ ಮಂಡಿಸಿ ರೈತರ ಪರ ಕೆಲಸ ಮಾಡಿದ್ದಾರೆ. ಅವರ ಸರ್ಕಾರ ಇದ್ದಾಗ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ಇರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದೆ ಎಂದು ಆರೋಪಿಸಿದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧವೂ ವಾಗ್ಧಾಳಿ ನಡೆಸಿದ ಮುರಳೀಧರ ರಾವ್ ರಾಹುಲ್ ಗಾಂಧಿ ಚುನಾವಣೆ ವೇಳೆ ಮಾತ್ರವೇ ಮಠ, ಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ. ಇವುಗಳು ಶ್ರದ್ಧಾ ಕೇಂದ್ರಗಳು ಆಗಬೇಕೆ ಹೊರತು ಚುನಾವಣಾ ವಿಷಯವಾಗಬಾರದು. ಮಠ ಮಂದಿರಗಳನ್ನು ವಶಕ್ಕೆ ತೆಗೆದುಕೊಳ್ಳಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ಇವುಗಳನ್ನು ಗೌರವದಿಂದ ಕಾಣುವುದಾಗಿ ತಿಳಿಸಿದರು.

ಮಹದಾಯಿ ವಿವಾದವನ್ನು ಬಗೆಹರಿಸುವ ಸಾಮರ್ಥ್ಯ ಇರುವುದು ಬಿಜೆಪಿಗೆ ಮಾತ್ರ. ಅಧಿಕಾರಕ್ಕೆ ಬಂದರೆ ಖಂಡಿತವಾಗಿ ಶೀಘ್ರ ಈ ವಿವಾದವನ್ನು ಬಗೆಹರಿಸುತ್ತೇವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ವಿವಾದವನ್ನು ಇತ್ಯರ್ಥ ಪಡಿಸುವ ಗೋಜಿಗೆ ಹೋಗಲಿಲ್ಲ.

ಶ್ರೀ ರಾಮುಲು ಅವರನ್ನು ಉಪ ಮುಖ್ಯಮಂತ್ರಿ ಎಂದು ಘೋಷಿಸುವ ಯಾವುದೇ ಉದ್ದೇಶ ತಮ್ಮ ಪಕ್ಷಕ್ಕೆ ಇಲ್ಲ. ಅವರು ಚುನಾವಣಾ ಅಭ್ಯರ್ಥಿ ಮಾತ್ರವಲ್ಲ. ಪಕ್ಷದ ಸ್ಟಾರ್ ಪ್ರಚಾರಕರು. ಇಡೀ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಬಳಸಿಕೊಳ್ಳಲಿದ್ದೇವೆ.

ಆಂಧ್ರ ಪ್ರದೇಶಕ್ಕೆ ಬಿಜೆಪಿ ಅನ್ಯಾಯ ಮಾಡಿದೆ ಎಂಬ ಆರೋಪ ಸರಿಯಲ್ಲ. ಈ ಸವಾಲನ್ನು ರಾಜಕೀಯವಾಗಿ ಎದುರಿಸಲು ಸಜ್ಜಾಗಿದ್ದೇವೆ. ಬಿಜೆಪಿಯ ಶಕ್ತಿ ಇರುವುದೇ ತೆಲುಗು ಭಾಷಿಕರು ಹೆಚ್ಚು ಇರುವ ಪ್ರದೇಶಗಳಲ್ಲೇ ಈ ಬಾರಿಯ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲಲಿದ್ದೇವೆ.

ಮುರಳೀಧರ ರಾವ್

ರಾಜ್ಯ ಬಿಜೆಪಿ ಉಸ್ತುವಾರಿ,

Leave a Comment