ಸಿದ್ದು ವಿರುದ್ಧ ಹೆಚ್‌ಡಿಕೆ ದೂರು : ದೋಸ್ತಿಗಳ ಮಧ್ಯೆ ಮತ್ತಷ್ಟು ಬಿರುಕು, ಅಪಾಯದಲ್ಲಿ ಸರ್ಕಾರ

ನವದೆಹಲಿ, ಆ. ೩೦- ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಪತನವಾದರೆ ಇಲ್ಲವೆ ಯಾವುದೇ ಸಮಸ್ಯೆಗೆ ಸಿಲುಕಿದರೆ, ಅದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ದೂರು ನೀಡಿದ್ದಾರೆ.

  •  ಸಿದ್ದು ನಡೆಗೆ ಎಚ್.ಡಿ.ಕೆ. ಬೇಸರ.
  •  ರಾಹುಲ್‌ಗೆ ಕುಮಾರಸ್ವಾಮಿ ದೂರು.
  •  ಸರ್ಕಾರಕ್ಕೆ ತೊಂದರೆಯಾದರೆ ಸಿದ್ದು ನೇರ ಕಾರಣ.
  •  ಅನಗತ್ಯ ಹೇಳಿಕೆ ಕಡಿವಾಣಕ್ಕೆ ಮನವಿ.
  •  ಸಿದ್ದು ವಿದೇಶ ಪ್ರವಾಸದಿಂದ ತೊಂದರೆಯಾಗದಂತೆ ನೋಡಿಕೊಳ್ಳಿ.
  •  ಪರಮೇಶ್ವರ್ ಮೌನ, ಹಲವು ಸಮಸ್ಯೆಗಳಿಗೂ ಕಾರಣ.
  •  ವೇಣುಗೋಪಾಲ್ ಮೂಲಕ ಸ್ಪಷ್ಟ ಸಂದೇಶ ರವಾನೆಗೆ ಆಗ್ರಹ.

ಸಿದ್ದರಾಮಯ್ಯ ಮತ್ತು ಅವರ ತಂಡದ ಅನೇಕ ಸದಸ್ಯರು ಪದೇಪದೇ ಸರ್ಕಾರಕ್ಕೆ ಮುಜುಗರ ಉಂಟು ಮಾಡುವಂತಹ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದು, ಅವರನ್ನು ಕರೆದು ಬುದ್ಧಿ ಹೇಳಿ. ಸರ್ಕಾರಕ್ಕೆ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಿ ಎಂದು ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದಾರೆ. ದೆಹಲಿಯ ನಿವಾಸದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯದ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ರಾಹುಲ್ ಗಾಂಧಿ ಅವರಿಗೆ ಕುಮಾರಸ್ವಾಮಿ ದೂರು ನೀಡಿರುವುದು ದೋಸ್ತಿಗಳ ಮಧ್ಯೆ ಉಂಟಾಗಿರುವ ವಿಶ್ವಾಸದ ಬಿರುಕು ಮತ್ತಷ್ಟು ಹೆಚ್ಚಾಗುವಂತಾಗಿದೆ.

ಸಿದ್ದರಾಮಯ್ಯ ಅವರ ಇತ್ತೀಚಿನ ಮಾತುಗಳು, ನಡವಳಿಕೆಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ. ಸರ್ಕಾರಕ್ಕೆ ಸಮಸ್ಯೆ ಎದುರಾದರೆ, ಅದಕ್ಕೆ ಅವರೇ ನೇರ ಕಾರಣ. ಅನಗತ್ಯವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ, ಗೊಂದಲದ ವಾತಾವರಣವನ್ನು ಸೃಷ್ಟಿ ಮಾಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಮುಜುಗರ ಎದುರಿಸುವಂತಾಗಿದೆ ಎಂದು ಸಿದ್ದರಾಮಯ್ಯ ವರ್ತನೆ ಬಗ್ಗೆ ನೇರವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ಸಿದ್ದರಾಮಯ್ಯ ಮತ್ತು ತಂಡ ವಿದೇಶ ಪ್ರವಾಸ ಕೈಗೊಂಡಿದ್ದು, ಈ ವೇಳೆ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ, ಅಡೆತಡೆ ಎದುರಾಗದಂತೆ ನೋಡಿಕೊಳ್ಳುವುದು ನಿಮ್ಮ ಮೇಲಿರುವ ಜವಾಬ್ದಾರಿ. ಅದಕ್ಕೆ ಅವಕಾಶ ಮಾಡಿಕೊಡದಂತೆ ಉತ್ತಮ ಹಾಗೂ ಪ್ರಗತಿಪರ ಆಡಳಿತ ನೀಡಲು ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.

ಸರ್ಕಾರಕ್ಕೆ ಮುಜುಗರವಾಗುವ ಹೇಳಿಕೆಯಿಂದ ಮೈತ್ರಿ ಸರ್ಕಾರಕ್ಕೆ ಡ್ಯಾಮೇಜ್ ಆಗುತ್ತಿದೆ. ಮುಂದೆ ಏನಾದರೂ ಹೆಚ್ಚು – ಕಡಿಮೆ ಆದರೆ ಸಿದ್ದರಾಮಯ್ಯ ಅವರೇ ನೇರ ಹೊಣೆಗಾರರು. ವಿವಾದಾತ್ಮಕ ಹೇಳಿಕೆಯಿಂದ ಅವುಗಳ ಬಗ್ಗೆ ಗಮನ ಹರಿಸಬೇಕೆ ಅಥವಾ ಅಭಿವೃದ್ಧಿ ಕಾರ್ಯಗಳ ಬಗ್ಗೆ ಒತ್ತು ನೀಡಬೇಕೆ, ಯಾವುದೂ ಅರ್ಥವಾಗುತ್ತಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನಿಮ್ಮ ಗಮನಕ್ಕೆ ತಂದಿದ್ದೇನೆ. ಮುಂದೆ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ರಾಹುಲ್ ಗಾಂಧಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸಮ್ಮಿಶ್ರ ಸರ್ಕಾರಕ್ಕೆ ಅಡ್ಡಿ, ಆತಂಕಗಳು ಎದುರಾಗಿ ಸಮಸ್ಯೆಗೆ ಸಿಲುಕಿದರೆ, ನಮ್ಮನ್ನು (ಜೆಡಿಎಸ್) ವಿನಾಕಾರಣ ದೂರಬೇಡಿ. ಹಾಗೇನಾದರೂ ಸಮಸ್ಯೆಗಳಾದರೆ ನಿಮ್ಮ ನಾಯಕರೇ ಕಾರಣ. ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮೂಲಕ ಸಿದ್ದರಾಮಯ್ಯ ಮತ್ತು ಅವರ ತಂಡಕ್ಕೆ ಸೂಕ್ತ ನಿರ್ದೇಶನವನ್ನು ರವಾನಿಸಿ ಎಂದು ಅವಲತ್ತುಗೊಂಡಿದ್ದಾರೆ.

ಡಿಸಿಎಂ ಮೌನ

ಸಮ್ಮಿಶ್ರ ಸರ್ಕಾರ ಮತ್ತು ಆಡಳಿತ ವೈಖರಿಯ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಏನೇ ಮಾತನಾಡಿದರೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು, ಯಾವುದೇ ಪ್ರತಿಕ್ರಿಯಿಸುವುದಿಲ್ಲ. ಇದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸುವಂತಾಗಲಿದೆ. ಈ ಬಗ್ಗೆ ಪರಮೇಶ್ವರ್ ಅವರಿಗೂ ಸೂಕ್ತ ನಿರ್ದೇಶನ ನೀಡಿ ಎಂದು ಕುಮಾರಸ್ವಾಮಿ, ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಸರ್ಕಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರ ಬಗ್ಗೆ ಪರಮೇಶ್ವರ್ ಅವರು, ಕಠಿಣ ಮಾತುಗಳಲ್ಲಿ ತಿರುಗೇಟು ನೀಡಿದರೆ, ಯಾವೊಬ್ಬ ನಾಯಕರೂ ಮತ್ತೆ ಮಾತನಾಡುವುದಿಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಅಡೆತಡೆಯಾಗದಂತೆ ಎಚ್ಚರಿಕೆ ವಹಿಸುವಂತೆಯೂ ಸೂಚಿಸಿ ಎಂದು ಹೇಳಿದ್ದಾರೆ.

Leave a Comment