ಸಿದ್ದು ಚೇಲಾಗಳಿಂದ ಸೋಬಾನ ಪದ: ಈಶ್ವರಪ್ಪ ಲೇವಡಿ

ಹುಬ್ಬಳ್ಳಿ, ಮೇ 15- ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಮತ್ತೆ ಸಿಎಂ ಪಟ್ಟಕ್ಕೇರಿಸಲು ಅವರ ಚೇಲಾಗಳು ಸೋ……. ಸೋಬಾನ ಪದ ಹಾಡುತ್ತಿದ್ದಾರೆಂದು ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಇಂದಿಲ್ಲಿ ಗೇಲಿ ಮಾಡಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಎಲ್ಲ ಮುಖಂಡರು ನರಸತ್ತವರು, ಈಗ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗುವ ಪರಿಸ್ಥಿತಿ ಇಲ್ಲದಿರುವಾಗಲೇ ಅವರ ಚೇಲಾಗಳು ಸೋ… ಎನ್ನುತ್ತಿದ್ದಾರೆ ಎಂದರು.
ಇದೆಲ್ಲವನ್ನು ಗಮನಿಸುತ್ತಿರುವ ಸಂಸದ ಮಲ್ಲಿಕಾರ್ಜುನ ಖರ್ಗೆ ಬಾಯಿ ಮುಚ್ಚಿಕೊಂಡಿದ್ದಾರೆ. ಸ್ವಾಭಿಮಾನವಿರುವ ಖರ್ಗೆ ಏಕೆ ಸುಮ್ಮನಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದರು.
ಮೈತ್ರಿಕೂಟದ ಯುದ್ಧ ಮುಗಿದಿದೆ, ಇನ್ನೇನಿದ್ದರೂ ಪಿಚ್ಚರ್ ಮಾತ್ರ ಬಾಕಿಯಿದೆ, ಮೇ. 23ರ ನಂತರ ಅದೂ ಹೊರಬರಲಿದೆ, ರಾಜ್ಯದಲ್ಲಿ ಸದ್ಯ ಇಂಟರವೆಲ್ ರೂಪದಲ್ಲಿ ದೋಸ್ತಿ ಸರ್ಕಾರ ನಡೆಯುತ್ತಿದೆ ಎಂದು ಅವರು ಆಪಾದಿಸಿದರು.
ಮೇ. 23ರ ನಂತರ ಸಚಿವ ಡಿ.ಕೆ. ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಹುಡುಕಿ ಹೆಕ್ಕಿ ತೆಗೆಯಬೇಕಾದ ಪರಿಸ್ಥಿತಿ ಬರಲಿದೆ ಎಂದರು.
ಸಿದ್ಧರಾಮಯ್ಯನವರಿಗೆ ಹುಚ್ಚು ಹಿಡಿದಿರುವುದು ನಿಜ, ಅವರನ್ನು ನಿಮಾನ್ಸ್‌ಗೆ ಆಸ್ಪತ್ರೆಗೆ ಸೇರಿಸಿದರೆ ಒಳ್ಳೆಯದು ಎಂದು ಅವರು ಸಲಹೆ ನೀಡಿದರು.
ಇನ್ನು ಬಿಜೆಪಿ ಅಧಿಕಾರಕ್ಕೆ ಬಂದರೆ ನಾನು ವಾಚಮನ್ ಕೆಲಸ ಮಾಡುತ್ತೇನೆಂದು ಹೇಳಿಕೆ ನೀಡಿರುವ ಸಚಿವ ಜಮೀರ್ ಅಹ್ಮದ್ ಒಬ್ಬ ಕಳ್ಳ, ಅಂತಹ ಕಳ್ಳನನ್ನು ವಾಚಮನ್ ಕೆಲಸಕ್ಕೆ ಇಟ್ಟುಕೊಳ್ಳಬಾರದೆಂದು ಯಡಿಯೂರಪ್ಪನವರಿಗೆ ಸಲಹೆ ನೀಡುತ್ತೇನೆ ಎಂದು ಈಶ್ವರಪ್ಪ ಗುಡುಗಿದರು.
ನಾನು ಹೋರಾಟದಿಂದ ರಾಜಕೀಯಕ್ಕೆ ಬಂದವನು, ನನಗೆ ಕಾಂಗ್ರೆಸ್ಸಿನವರ ತರಹ ಚಮಚಾಗಿರಿ ರಾಜಕೀಯ ಗೊತ್ತಿಲ್ಲ, ಯಡಿಯೂರಪ್ಪನವರು ಸಿಎಂ ಆಗುವುದು ಖಚಿತ, ನನ್ನ ಜೊತೆ ಯಾವುದೇ ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿ ಇಲ್ಲಾ ಎಂದು ಅವರು ಸ್ಪಷ್ಟಪಡಿಸಿದರು.

Leave a Comment