ಸಿದ್ದು ಅಹಿಂದ ಬಲ ಕುಗ್ಗಿಸಲು ವಿಶ್ವನಾಥ್‌ಗೆ ಜೆಡಿಎಸ್ ಅಧ್ಯಕ್ಷ ಪಟ್ಟ

ಬೆಂಗಳೂರು, ಆ. ೩- ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದಲೂ ಅವಕಾಶ ಸಿಕ್ಕಾಗಲೆಲ್ಲಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಶಕ್ತಿಯನ್ನು ಕುಂದಿಸುವ ಪ್ರಯತ್ನಗಳನ್ನು ನಡೆಸಿರುವ ಜೆಡಿಎಸ್ ನಾಯಕರು, ಈಗ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಮಾಜಿ ಸಚಿವ ಹಾಗೂ ಶಾಸಕ ಹೆಚ್. ವಿಶ್ವನಾಥ್ ಅವರನ್ನು ನೇಮಕ ಮಾಡುವ ಮೂಲಕ ಸಿದ್ದು ಬೆನ್ನ ಹಿಂದಿರುವ ಅಹಿಂದಾ ವರ್ಗವನ್ನು ವಿಭಜಿಸುವ ತಂತ್ರ ಹೆಣೆದಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದದ ಪ್ರಶ್ನಾತೀತ ನಾಯಕರು ಎಂಬುದರಲ್ಲಿ ಎರಡು ಮಾತಿಲ್ಲ. ಅಹಿಂದವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವ, ಸಮ್ಮಿಶ್ರ ಸರ್ಕಾರದ ವಿರುದ್ಧ ಸಮಯ ಸಿಕ್ಕಾಗಲೆಲ್ಲಾ ಗುಟುರು ಹಾಕುತ್ತಿರುವ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜತೆಗಿನ ಮೈತ್ರಿಗೆ ಅಡ್ಡಿಯಾಗಿರುವ ಸಿದ್ದರಾಮಯ್ಯನವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ವ್ಯವಸ್ಥಿತ ತಂತ್ರವನ್ನು ಜೆಡಿಎಸ್ ನಾಯಕರು ಹೆಣೆದಿದ್ದು, ಅದರ ಭಾಗವಾಗಿಯೇ ಹೆಚ್. ವಿಶ್ವನಾಥ್‌ಗೆ ಜೆಡಿಎಸ್ ಅಧ್ಯಕ್ಷ ಸ್ಥಾನ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಸಕ ಹೆಚ್. ವಿಶ್ವನಾಥ್ ಇಬ್ಬರೂ ಕುರುಬ ಸಮುದಾಯಕ್ಕೆ ಸೇರಿರುವುದರಿಂದ ವಿಶ್ವನಾಥ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಕುರುಬ ಸಮುದಾಯದ ಮತಗಳನ್ನು ಸೆಳೆಯಬಹುದು. ಜತೆಗೆ ಸಿದ್ದರಾಮಯ್ಯನವರ ನಾಯಕತ್ವಕ್ಕೆ ಪೆಟ್ಟು ನೀಡಬಹುದು ಎಂಬ ಲೆಕ್ಕಾಚಾರ ಜೆಡಿಎಸ್ ನಾಯಕರದ್ದಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸರಿಸಾಟಿಯಾಗಿ ಹೆಚ್. ವಿಶ್ವನಾಥ್ ಅಹಿಂದ ಮತಗಳನ್ನು ಸೆಳೆಯುವಷ್ಟು ಶಕ್ತಿ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ವಿಶ್ವನಾಥ್‌ರವರನ್ನು ಅಧ್ಯಕ್ಷರನ್ನಾಗಿ ಮಾಡಲು ಜೆಡಿಎಸ್ ವರಿಷ್ಠರು ತೀರ್ಮಾನಿಸಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ವಿಶ್ವನಾಥ್ ನೇಮಕಗೊಂಡರೆ ಸಿದ್ದರಾಮಯ್ಯನವರ ರಾಜಕೀಯ ಶಕ್ತಿ ಕುಗ್ಗುತ್ತದೆ. ಈಗಾಗಲೇ ಕಾಂಗ್ರೆಸ್‌ನಲ್ಲೂ ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನಗಳು ನಡೆದಿವೆ.
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯನವರ ರಾಜಕೀಯ ಶಕ್ತಿ ಕುಂದಿಸಲು ಜೆಡಿಎಸ್ ಜತೆ ಕೈಜೋಡಿಸಿರುವುದು ಬಹಿರಂಗ ಸತ್ಯ. ಹಾಗಾಗಿಯೇ ಜೆಡಿಎಸ್ ನಾಯಕರು ಸಹ ಸಿದ್ದರಾಮಯ್ಯನವರನ್ನು ಮೂಲೆಗುಂಪು ಮಾಡಿದರೆ ಸರ್ಕಾರದ ಮೇಲೂ ಜೆಡಿಎಸ್ ನಿಯಂತ್ರಣ ಹೆಚ್ಚಾಗುವ ಜತೆಗೆ ರಾಜ್ಯ ರಾಜಕೀಯದಲ್ಲೂ ಮೇಲುಗೈ ಸಾಧಿಸಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಹಾಗಾಗಿಯೇ ಹೆಚ್. ವಿಶ್ವನಾಥ್ ಅವರನ್ನು ಜೆಡಿಎಸ್ ಅಧ್ಯಕ್ಷರನ್ನಾಗಿಸುವ ತೀರ್ಮಾನವನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.

Leave a Comment