ಸಿದ್ದರಾಮಯ್ಯ ಸರ್ಕಾರದ ಸಾಮಾಜಿಕ, ಆರ್ಥಿಕ ವರದಿಗೆ ಎಳ್ಳುನೀರು ಬಿಡಲು ಸರ್ಕಾರದ ಚಿಂತನೆ

ಬೆಂಗಳೂರು,ಸೆ 23. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ನೇತೃತ್ವದಲ್ಲಿ ಬರೋಬ್ಬರಿ 148 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದ್ದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ ಬಿಜೆಪಿ ಸರ್ಕಾರ ಎಳ್ಳುನೀರು ಬಿಡಲು ಹೊರಟಿದ್ದು, ಸಮೀಕ್ಷೆಯನ್ನು ಪುರಸ್ಕರಿಸುವಂತೆ ಕಾಂತರಾಜು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್  ತಾವು ಸಿದ್ಧಪಡಿಸಿರುವ ವರದಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯೇ ಹೊರತು ಯಾವುದೇ ಜಾತಿ ಸಮೀಕ್ಷೆಯಲ್ಲ. ಈ ಸಮೀಕ್ಷೆಯಲ್ಲಿ ಜಾತಿ, ಧರ್ಮವಾರು, ಸಾಮಾಜಿಕ, ಆರ್ಥಿಕ ಶೈಕ್ಷಣಿಕವಾಗಿ ಕುಟುಂಬದ ಸದಸ್ಯರು ಯಾವಯಾವ ಸೌಲಭ್ಯ ಪಡೆದಿದ್ದಾರೆ ಎಂಬ ಮಾಹಿತಿ ಇದೆ ಎಂದು ಸ್ಪಷ್ಟಪಡಿಸಿದರು.

ಸಮೀಕ್ಷೆಯಲ್ಲಿ 1.66 ಲಕ್ಷ ಸಿಬ್ಬಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. 1931 ರ ನಂತರ ದೇಶದಲ್ಲಿ ಈ ರೀತಿಯ ಸಮಗ್ರ ಸಮೀಕ್ಷೆ ನಡೆದಿರಲಿಲ್ಲ. ಎಲ್ಲಾ ಸಮುದಾಯಗಳನ್ನು ಒಳಗೊಂಡಿರುವ ಸಮಗ್ರ ವರದಿ ಇದಾಗಿದೆ ಎಂದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ವರದಿ ಪೂರ್ಣಗೊಂಡಿದೆ ಎಂದು ಹೇಳಿದ್ದೆವು. ಯಡಿಯೂರಪ್ಪ ಅವರನ್ನೂ ಸಹ ಭೇಟಿಯಾಗಿ ವರದಿ ಪುರಸ್ಕರಿಸುವಂತೆ ಮನವಿ ಮಾಡಿದ್ದೇವಾದರೂ ಯಾರೂ ಸರಿಯಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿದರು.

12 ಪ್ರಮುಖ ಅಂಶಗಳು 50 ಸಂಪುಟಗಳನ್ನೊಳಗೊಂಡ ವರದಿ ಇದು.1.35 ಕೋಟಿ ಮನೆಗಳಿಗೆ ಭೇಟಿ ಕೊಟ್ಟು ಸಮೀಕ್ಷೆ ಮಾಡಲಾಗಿದೆ.ಬರೀ ಹಿಂದುಳಿದ ವರ್ಗಗಳ ಸೌಲಭ್ಯಕ್ಕಾಗಿ ವರದಿ ಸಿದ್ಧಪಡಿಸಿಲ್ಲ.ವರದಿ ಸಿದ್ಧಪಡಿಸಲು 14 ತಿಂಗಳು ಸಮಯಾವಕಾಶ ತೆಗೆದುಕೊಳ್ಳಲಾಗಿದೆ. 5.83 ಲಕ್ಷ ಜನರನ್ನು ವರದಿಯಲ್ಲಿ ಸೇರಿಸಲಾಗಿದೆ.ಎಲ್ಲ‌ ಸಮುದಾಯಗಳನ್ನ ಒಳಗೊಂಡ ವರದಿ ಇದು. ಸರ್ಕಾರ ವರದಿಯನ್ನು ಸ್ವೀಕರಿಸಿಲ್ಲ. ಆದ್ರೆ ಸಮಿತಿಯನ್ನು ವಜಾಗೊಳಿಸಿದೆ. ನಮ್ಮ ಸಮಿತಿಯನ್ನೇ ಮುಂದುವರೆಸಲಿ ಎಂದು ಸರ್ಕಾರಕ್ಕೆ ಬೇಡಿಕೆ ಇಡುವುದಿಲ್ಲ. ಸರ್ಕಾರ ಆಯೋಗದಿಂದ ತರಿಸಿಕೊಂಡು ಜಾರಿ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡುವುದಾಗಿ ಕಾಂತರಾಜ್ ಹೇಳಿದರು.

ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರ ಸಮೀಕ್ಷೆ ಮಾಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಾಂತರಾಜು ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ಸಮೀಕ್ಷೆ ಹಾಗೂ ವರದಿ ಸಿದ್ಧಪಡಿಸಲು ಸುಮಾರು 4 ವರ್ಷ ತೆಗೆದುಕೊಂಡಿತ್ತು.

ಆಯೋಗ ಸಿದ್ಧಪಡಿಸಿರುವ ವರದಿಯಲ್ಲಿ ಒಕ್ಕಲಿಗರು ಹಾಗೂ ಲಿಂಗಾಯತರ ಸಂಖ್ಯೆಗಿಂತ ದಲಿತರೇ ಹೆಚ್ಚಾಗಿದ್ದಾರೆ ಎಂಬ ಅಂಶ ಇದೆ ಎಂಬ ಕಾರಣಕ್ಕಾಗಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ವರದಿಯನ್ನು ಪುರಸ್ಕರಿಸಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

Leave a Comment