ಸಿದ್ದರಾಮಯ್ಯ ಬಂದರೂ ತೀರದ ಎನ್.ಎಸ್.ಆರ್ ಮುನಿಸು

ಬಳ್ಳಾರಿ, ಏ.19: ಕೆಪಿಸಿಸಿ ಉಪಾಧ್ಯಕ್ಷ, ಬಳ್ಳಾರಿ ಲೋಕಸಭಾ ಕ್ಷೇತ್ರದ ವೀಕ್ಷಕ, ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ ಅವರು ಇಂದು ಸಹ ತಮ್ಮ ಕಛೇರಿ ಬಿಟ್ಟು ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ತೆರಳಿಲ್ಲ. ಇದರಿಂದ ರಾಜ್ಯ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ನಿನ್ನೆ ರಾತ್ರಿ ಅವರ ಕಛೇರಿಗೆ ತೆರಳಿ ನಡೆಸಿದ ಮುನಿಸು ತಿದ್ದುವ ಪ್ರಯತ್ನ ಫಲ ನೀಡಿಲ್ಲ ಎಂದು ಕಾಣುತ್ತೆ.

ಕಳೆದ ಹಲವು ಚುನಾವಣೆಗಳಲ್ಲಿ ತಮ್ಮ ಶಕ್ತಿ ಸಾಮರ್ಥ್ಯದಿಂದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದ ಸಂಘಟನಾ ಚತುರರಾದ ನಾರಾಯಣರೆಡ್ಡಿ ಅವರಿಗೆ, ಕಾಂಗ್ರೆಸ್ ಪಕ್ಷದ ಹುದ್ದೆಗಳನ್ನು ನೀಡಿದರೂ ಅಧಿಕಾರದ ಸ್ಥಾನಮಾನ ನೀಡಲಿಲ್ಲ ಎಂಬ ಕಾರಣಕ್ಕೆ ಈ ಬಾರಿ ಲೋಕಸಭಾ ಚುನಾವಣೆ ಪ್ರಚಾರದಿಂದ ಮಾತ್ರ ಆರಂಭದಿಂದಲೂ ಇಂದಿನ ವರೆಗೂ ದೂರು ಉಳಿದುಕೊಂಡಿದ್ದಾರೆ ಅವರು.

ಇದಕ್ಕೆ ಅವರು ಮುನಿಸಿಕೊಂಡಿದ್ದಾರೆ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ. ನಮ್ಮ ನಾಯಕ ಪಕ್ಷಕ್ಕಾಗಿ ಎಷ್ಟೆಲ್ಲಾ ಶ್ರಮಪಟ್ಟರೂ ಸೂಕ್ತ ಅಧಿಕಾರ ನೀಡಿಲ್ಲ ಎನ್ನುತ್ತಿದ್ದಾರೆ.

ಅವರ ಮುನಿಸನ್ನು ಈಗಾಗಲೇ ತಿದ್ದಲು ಅಭ್ಯರ್ಥಿ ಉಗ್ರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಮಾಡಿದ ಪ್ರಯತ್ನಕ್ಕೆ ಅವರು ಸೊಪ್ಪು ಹಾಕಿರಲಿಲ್ಲ.

ಒಂದು ದಿನ ಮಾತ್ರ ಸಿರುಗುಪ್ಪಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಅವರು, ಬಳ್ಳಾರಿ ಕ್ಷೇತ್ರದಿಂದ ಮಾತ್ರ ದೂರ ಉಳಿದಿದ್ದಾರೆ.

ಅದಕ್ಕಾಗಿ ನಿನ್ನೆ ಕುರುಗೋಡು, ಬಳ್ಳಾರಿ ನಗರದಲ್ಲಿ ಪ್ರಚಾರ ನಡೆಸಿದ ನಂತರ ಸಿದ್ದರಾಮಯ್ಯ ಅವರು, ಮಾಜಿ ಸಚಿವ ಸಂತೋಷ್ ಲಾಡ್, ಶಾಸಕ ಬಿ.ನಾಗೇಂದ್ರ ಮೊದಲಾದವರೊಂದಿಗೆ ಗಾಂಧಿನಗರದಲ್ಲಿನ ಅವರ ಕಛೇರಿಗೆ ತೆರಳಿ ಅರ್ಧ ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.

ಚರ್ಚೆ ವೇಳೆ ಸಿದ್ದರಾಮಯ್ಯ ಅವರು ಪ್ರೀತಿಯಿಂದಲೇ ತೆಲುಗಿನಲ್ಲಿ “ರಂಡಿ ರೆಡ್ಡಿಗಾರು” ಎಂದು ಕರೆದು ಪಕ್ಷದ ಪರ ಪ್ರಚಾರಕ್ಕೆ ಸೂಚಿಸಿದರಂತೆ ಆಗ ಅವರು ನಾನೇನು ಬೇರೆ ಪಕ್ಷಕ್ಕೆ ಹೋಗಿಲ್ಲ ಸಾರ್ ಪಕ್ಷದಲ್ಲೇ ಇದ್ದೇನೆ. ಚುನಾವಣೆ ಮಾಡಲು ಮಹಾನ್ ಮಹಾನ್ ಲೀಡರ್ ಗಳು ಇದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಮುನಿಸಿ ವ್ಯಕ್ತಪಡಿಸಿದಂತೆ ಏನೇ ಆಗಲಿ ಮುಂದಿನ ದಿನದಲ್ಲಿ ನಿನಗೆ ಪಕ್ಷ ಉತ್ತಮ ಅವಕಾಶ ಕಲ್ಪಿಸುತ್ತೆ. ಪ್ರಚಾರ ಮಾಡಿ ಉಗ್ರಪ್ಪ ಅವರನ್ನು ಗೆಲ್ಲಿಸಿ ಎಂದು ಹೇಳಿ ಹೋದರಂತೆ.

ಆದರೂ ಇಂದು ರೆಡ್ಡಿ ಅವರು ಮಾತ್ರ ಇಂದು ಕಾಂಗ್ರೆಸ್ ಪ್ರಚಾರಕ್ಕೆ ತೆರಳದೇ ಮಧ್ಯಾಹ್ನದವರೆಗೆ ಕಛೇರಿಯಲ್ಲಿ ಇದ್ದರು.

ಬೆಂಬಲಿಗರನ್ನು ಕೇಳಿದರೆ ಪಕ್ಷಕ್ಕೆ ಏನು ಸಂದೇಶ ಕೊಡಬೇಕೋ ಕೊಟ್ಟಿದ್ದಾರೆ ನಮ್ಮ ನಾಯಕರು. ಮುಂದಿನದು ಪಕ್ಷಕ್ಕೆ ಬಿಟ್ಟಿದ್ದು. ದುಡಿದವರನ್ನು ಪಕ್ಷ ಪರಿಗಣಿಸಬೇಕೆಂದರು.

 

Leave a Comment