ಸಿದ್ದಗಂಗೆ ದನಗಳ ಜಾತ್ರೆಯಲ್ಲಿ ಭರ್ಜರಿ ವ್ಯಾಪಾರ

ಎಂ. ರಮೇಶ್ ಚಿ. ಸಾರಂಗಿ
ತುಮಕೂರು, ಫೆ. 13- ತ್ರಿವಿಧ ದಾಸೋಹದ ಕ್ಷೇತ್ರವೆಂದೇ ವಿಶ್ವ ಪ್ರಸಿದ್ದಿಯಾಗಿರುವ ಇತಿಹಾಸ ಪ್ರಸಿದ್ದ ಸಿದ್ದಗಂಗಾ ಕ್ಷೇತ್ರದಲ್ಲಿ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದಿರುವ ಜಾನುವಾರುಗಳ ಜಾತ್ರೆಗೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ರಾಸುಗಳು ಬಂದಿದ್ದು, ರಾಸುಗಳನ್ನು ಖರೀದಿಸಲು ಹಾಗೂ ಮಾರಲು ಶ್ರೀಕ್ಷೇತ್ರಕ್ಕೆ ರೈತರ ದಂಡೇ ಹರಿದು ಬಂದಿದೆ.

10 ದಿನಗಳ ಕಾಲ ನಡೆಯಲಿರುವ ಸಿದ್ದಗಂಗೆ ದನಗಳ ಜಾತ್ರೆಗೆ ನಾಡಿನ ವಿವಿಧ ಜಿಲ್ಲೆಗಳಾದ ಬಳ್ಳಾರಿ, ಬಿಜಾಪುರ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ, ದಾವಣಗೆರೆ, ಚಿತ್ರದುರ್ಗ, ರಾಮನಗರ, ಬೆಂಗಳೂರು ಗ್ರಾಮಾಂತರ, ಮದ್ದೂರು, ಮಂಡ್ಯ, ತುಮಕೂರು ಹಾಗೂ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಮತ್ತಿತರ ಕಡೆಗಳಿಂದಲೂ ರೈತರು ಜಾನುವಾರುಗಳು ಕರೆ ತಂದಿದ್ದು, ರಾಸುಗಳನ್ನು ಕೊಳ್ಳುವ ಮತ್ತು ಮಾರುವ ಪ್ರಕ್ರಿಯೆ ಪ್ರತಿ ವರ್ಷಕ್ಕಿಂತ ಈ ಬಾರಿ ಬಲು ಜೋರಾಗಿಯೇ ನಡೆದಿದೆ.

ನಗರದಿಂದ ಸಿದ್ದಗಂಗಾ ಮಠಕ್ಕೆ ಸಂಪರ್ಕ ಕಲ್ಪಿಸುವ ಬಂಡೆಪಾಳ್ಯದಿಂದ ಹಿಡಿದು ಸಿದ್ದಗಂಗಾ ಮಠದ ಆವರಣದಲ್ಲಿ ಎಲ್ಲಿ ಕಣ್ಣಾಯಿಸಿದರೂ ಕಣ್ಮನ ಸೆಳೆಯುವ ದನಗಳ ದಂಡೇ ಕಾಣ ಸಿಗುತ್ತಿವೆ.
ರೈತರು ಸರಕು ಸಾಗಣೆ ವಾಹನಗಳಲ್ಲಿ ದನಗಳನ್ನು ತುಂಬಿಕೊಂಡು ಬಂದಿದ್ದು, ಪೆಂಡಾಲ್ ಹಾಕಿ ದನಗಳಿಗೆ ನೆರಳಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಜತೆಗೆ ಶ್ರೀಮಠದ ವತಿಯಿಂದ ರಾಸುಗಳಿಗೆ ಮತ್ತು ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ರಾಜ್ಯದಲ್ಲಿ ಈ ಬಾರಿ ಅತಿವೃಷ್ಠಿ ಮತ್ತು ಅನಾವೃಷ್ಠಿ ಎರಡೂ ಸಹ ಸಮಾನಾಂತರವಾಗಿ ಸಂಭವಿಸಿದೆ. ಆದರೂ ಪ್ರತಿ ವರ್ಷಕ್ಕಿಂತ ಈ ಬಾರಿ ಸಿದ್ದಗಂಗೆಯ ಜಾನುವಾರು ಜಾತ್ರೆಯಲ್ಲಿ ರಾಸುಗಳ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯುತ್ತಿರುವುದು ಕಂಡು ಬರುತ್ತಿದೆ.

ಗ್ರಾಮೀಣ ಭಾಗದ ರೈತರುಗಳು ದನಗಳ ವ್ಯಾಪಾರ ಮಾಡುವ ರೀತಿಯೇ ಈ ಜಾತ್ರೆಯಲ್ಲಿ ವಿಭಿನ್ನವಾಗಿರುತ್ತದೆ. ರಾಸುಗಳನ್ನು ಕೊಳ್ಳುವ ಮತ್ತು ಮಾರುವ ರೈತರು ಪರಸ್ಪರ ಕೈ ಮೇಲೆ ಟವಲ್ ಹಾಕಿಕೊಂಡು ಯಾರಿಗೂ ಕಾಣದಂತೆ ಕೈ ಬೆರಳುಗಳನ್ನು ಹಿಡಿದುಕೊಂಡು ಒಂದು ಜತೆ ರಾಸಿಗೆ ಇಂತಿಷ್ಟು ಹಣ ಎಂದು ನಿಗದಿಪಡಿಸಿ ಖರೀದಿಸುವ ಪ್ರಕ್ರಿಯೆಗಳು ನೋಡುಗರನ್ನು ನಿಬ್ಬೆರಗುಗೊಳಿಸುವಂತಿದೆ. .
ಬೆಲೆ ದುಪ್ಪಟು

ಈ ಜಾತ್ರೆಯಲ್ಲಿ ಕನಿಷ್ಠ 50 ಸಾವಿರದಿಂದ ಹಿಡಿದು ಆರೇಳು ಲಕ್ಷದವರೆಗೂ ಒಂದು ಜೋಡಿ ಎತ್ತುಗಳ ಬೆಲೆ ನಿಗದಿಯಾಗಿದ್ದು, ರಾಸುಗಳನ್ನು ಕೊಳ್ಳಲು ಮತ್ತು ಮಾರಲು ರೈತರು ಮುಗಿ ಬೀಳುತ್ತಿರುವುದು ಈ ಬಾರಿಯ ವಿಶೇಷವಾಗಿದೆ.

ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಲಿಂಗೈಕ್ಯ ಹಿರಿಯ ಶ್ರೀಗಳಂತೆಯೇ ರಾಸುಗಳ ಜಾತ್ರೆಯುದ್ದಕ್ಕೂ ಸಂಚರಿಸಿ ರೈತರು ಹಾಗೂ ರಾಸುಗಳ ಯೋಗಕ್ಷೇಮ ವಿಚಾರಿಸಿ, ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.

ರಾಜ್ಯ ಮತ್ತು ಹೊರ ರಾಜ್ಯಗಳಿಂದ ದನಗಳ ಜಾತ್ರೆಗಾಗಿ ಶ್ರೀಮಠಕ್ಕೆ ಬಂದಿರುವ ರೈತರಿಗೆ ಮಠದಲ್ಲೇ ಮೂರು ಹೊತ್ತು ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ಯಾವೊಬ್ಬ ರೈತರು ಕುಡಿಯಲು ನೀರು, ಊಟ ಇಲ್ಲದೆ ಬಳಲಬಾರದು ಎಂಬ ಉದ್ದೇಶದಿಂದ ಜಾತ್ರಾ ಮಹೋತ್ಸವ ಮುಗಿಯುವವರೆಗೂ ಊಟ ಮತ್ತು ವಸತಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ.

ಜಾತ್ರೆಯ ಅಂಗವಾಗಿ ನಡೆಯುತ್ತಿರುವ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಪ್ರತಿನಿತ್ಯ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ರೈತರು ಪ್ರತಿನಿತ್ಯ ವಸ್ತುಪ್ರದರ್ಶನಕ್ಕೆ ಹೋಗಿ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸಿ ಆಸ್ವಾದಿಸುತ್ತಿದ್ದಾರೆ.
ರಾಸುಗಳ ಜಾತ್ರೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಗುತ್ತದೆ. ಜತೆಗೆ ಜಾನುವಾರುಗಳಿಗೆ ವಿಮೆಯ ಸೌಲಭ್ಯವನ್ನೂ ಕಲ್ಪಿಸಲಾಗಿದೆ.

ಜಾತ್ರೆಗೆ ಬಂದಿರುವ ರಾಸುಗಳಿಗೆ ರೋಗ ರುಜಿನಗಳು ಬಾರದಂತೆ ತಡೆಯುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿಯೇ ಪಶುಸಂಗೋಪನಾ ಇಲಾಖೆ ವೈದ್ಯರುಗಳನ್ನು ನಿಯೋಜಿಸಿದೆ. ಪಶು ವೈದ್ಯರು ಮತ್ತು ಸಿಬ್ಬಂದಿ ಜಾತ್ರೆಯಲ್ಲಿರುವ ಪ್ರತಿಯೊಂದು ರಾಸುಗಳ ಬಳಿ ತೆರಳಿ ರೈತರಿಗೆ ಸಲಹೆ ಸೂಚನೆ ನೀಡುವ ಕಾಯಕದಲ್ಲಿ ಮಗ್ನರಾಗಿದ್ದಾರೆ.

ಆಧುನಿಕತೆಯ ಸೋಗಿಗೆ ತಳಕು ಹಾಕಿಕೊಂಡಿರುವ ಪ್ರಸ್ತುತ ದಿನಗಳಲ್ಲಿ ದನಗಳ ಜಾತ್ರೆಯ ಮೆರುಗು ಕಡಿಮೆಯಾಗುತ್ತಿದೆ. ಆದರೆ ವರ್ಷಕ್ಕೊಮ್ಮೆ ನಡೆಯುವ ಸಿದ್ದಗಂಗೆ ದನಗಳ ಜಾತ್ರೆಯಲ್ಲಿ ಮಾತ್ರ ಮತ್ತೆ ಇತಿಹಾಸದ ಗತವೈಭವವನ್ನು ನೆನಪಿಸುವ ರೀತಿಯಲ್ಲಿ ದನಗಳ ಜಾತ್ರೆ ನ‌ಡೆಯುತ್ತಿರುವುದು ಇಲ್ಲಿನ ಸ್ಥಳ ಮಹಿಮೆಯ ಐತಿಹ್ಯಕ್ಕೆ ಸಾಕ್ಷಿಯಾಗಿದೆ.

Leave a Comment