ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಡಿಸಿಎಂ

ತುಮಕೂರು, ಡಿ. ೬- ನಗರದ ಸಿದ್ದಗಂಗಾ ಮಠಕ್ಕೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಇಂದು ಭೇಟಿ ನೀಡಿ ಮಠಾಧ್ಯಕ್ಷರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಆರೋಗ್ಯ ವಿಚಾರಿಸಿದರು.

ಶ್ರೀಗಳ ಆರೋಗ್ಯದಲ್ಲಿ ರಾತ್ರಿ ಕೊಂಚ ಏರುಪೇರಾಗಿ ಆತಂಕ ಸೃಷ್ಠಿಯಾಗಿದ್ದ ಹಿನ್ನೆಲೆಯಲ್ಲಿ ಬೆಳಿಗ್ಗೆ ಶ್ರೀಮಠಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಶ್ರೀಗಳು ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ವಿಶ್ರಾಂತಿ ಪಡೆದುಕೊಳ್ಳುವಂತೆ ಶ್ರೀಗಳಲ್ಲಿ ಮನವಿ ಮಾಡಿದರು.

ಶ್ರೀಗಳ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು, ಸದ್ಯ ಶ್ರೀಗಳ ಆರೋಗ್ಯ ಸುಧಾರಿಸುತ್ತಿದ್ದು, ಗುಣಮುಖರಾಗುತ್ತಿದ್ದಾರೆ. ವೈದ್ಯರ ತಂಡವೊಂದು ಚೆನ್ನೈಗೆ ತೆರಳಿದೆ. ಅಲ್ಲಿನ ವೈದ್ಯರೊಟ್ಟಿಗೆ ಮಾತನಾಡಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ನುರಿತ ವೈದ್ಯರ ಸಲಹೆ ಮೇರೆಗೆ ಶ್ರೀಗಳ ಮುಂದಿನ ಚಿಕಿತ್ಸೆ ಬಗ್ಗೆ ಮುಂದುವರೆಯಲಾಗುವುದು. ಚಿಕಿತ್ಸೆ ಅಗತ್ಯ ಬಿದ್ದರೆ ಆಸ್ಪತ್ರೆಗೆ ದಾಖಲು ಮಾಡಲಾಗುವುದು. ಇಲ್ಲದಿದ್ದಲ್ಲಿ ಮಠದಲ್ಲೇ ಚಿಕಿತ್ಸೆ‌ ಮುಂದುವರೆಸಲಾಗುವುದು ಎಂದರು.

ಶ್ರೀಗಳು ನನ್ನ ಜತೆಯೂ ಚೆನ್ನಾಗಿಯೇ ಮಾತನಾಡಿದರು. ಯಾವಾಗ ಬಂದ್ರಿ, ಚೆನ್ನಾಗಿದ್ದಿರಾ ಅಂದ್ರು. ಕಿರಿಯ ಶ್ರೀಗಳ ಬಳಿ ಹಿರಿಯ ಶ್ರೀಗಳು ತಮಗೆ‌ ಎಷ್ಟು ವಯಸ್ಸಾಯ್ತು ಎಂದು ಕೇಳಿದರು. ಆಗ ಕಿರಿಯ ಶ್ರೀಗಳು 111 ಅಂದ್ರು. ಅದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ ಶ್ರೀಗಳು ಬಹಳಾ ಆಯ್ತು.. ಬಹಳ ಆಯ್ತು ಅಂದ್ರು..

ಎಂದಿನಂತೆ ಲವಲವಿಕೆಯಿಂದಲೇ ಮಾತನಾಡಿದರು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕಿರಿಯ ಶ್ರೀಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

ಜ್ಯೋತಿಗಣೇಶ್ ಭೇಟಿ
ಶ್ರೀಗಳ ಅನಾರೋಗ್ಯದ ವಿಚಾರ ತಿಳಿದ ಕೂಡಲೇ ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಸಹ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಆರೋಗ್ಯ ವಿಚಾರಿಸಿದರು.

ನಂತರ ಮಾತನಾಡಿದ ಅವರು, ಶ್ರೀಗಳ ಲವಲವಿಕೆಯಿಂದಲೇ ಮಾತನಾಡಿದರು. ಎಂದಿನಂತೆ ಯುವಕರು ನಾಚಿಸುವ ಹಾಗೆಯೇ ಪೂಜಾ ಕೈಂಕರ್ಯದಲ್ಲಿ ತೊಡಗಿಕೊಂಡರು. ಭಕ್ತಾದಿಗಳು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದರು.

Leave a Comment