ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ

ತುಮಕೂರು, ಡಿ. ೬- ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಸಿದ್ದಗಂಗಾ ಮಠಾಧ್ಯಕ್ಷರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದ ಕಾರಣ ರಾತ್ರಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಠಿಯಾಗಿತ್ತು. ಆದರೆ ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇಂದು ಬೆಳಿಗ್ಗೆಯಿಂದ ಎಂದಿನಂತೆ ಲವಲವಿಕೆಯಿಂದ ಇದ್ದಾರೆ.

ಕಳೆದ ರಾತ್ರಿ ಶ್ರೀಗಳ ಹೃದಯಬಡಿತದಲ್ಲಿ ಕೊಂಚ ಏರುಪೇರಾಗಿತ್ತು. ಅಲ್ಲದೆ ಶೀತ, ಕೆಮ್ಮು, ಜ್ವರ ಸಹ ಕಾಣಿಸಿಕೊಂಡಿತ್ತು. ಇದರಿಂದ ಶ್ರೀಕ್ಷೇತ್ರ ಸೇರಿದಂತೆ ಕಲ್ಪತರುನಾಡಿನಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿತ್ತು.

ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿರುವ ವಿಚಾರ ತಿಳಿಯುತ್ತಿದ್ದಂತೆ ಶ್ರೀಗಳ ಆಪ್ತ ವೈದ್ಯರಾದ ಡಾ. ಪರಮೇಶ್ ನೇತೃತ್ವದ ತಂಡ ಮಠಕ್ಕೆ ತೆರಳಿ ಶ್ರೀಗಳಿಗೆ ಚಿಕಿತ್ಸೆ ನೀಡಿದರು.

ನಂತರ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ವೈದ್ಯರಾದ ಡಾ. ರವೀಂದ್ರ ನೇತೃತ್ವದ ವೈದ್ಯರ ತಂಡವೂ ಶ್ರೀಕ್ಷೇತ್ರಕ್ಕೆ ಆಗಮಿಸಿ ತಡರಾತ್ರಿವರೆವಿಗೂ ಶ್ರೀಗಳ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು.

ವೈದ್ಯರ ಚಿಕಿತ್ಸೆ ಬಳಿಕ ಶ್ರೀಗಳು ಚೇತರಿಸಿಕೊಂಡಿದ್ದು, ಇಂದು ಬೆಳಿಗ್ಗೆ ಎಂದಿನಂತೆ ಲವಲವಿಕೆಯಿಂದ ಪರಿಚಾರಕರ ಸಹಾಯದೊಂದಿಗೆ ನಡೆದುಕೊಂಡೇ ಹಳೇಮಠದ ಗದ್ದುಗೆಗೆ ಬಂದು ಕುಳಿತುಕೊಂಡರು.

ಶ್ರೀಗಳಿಗೆ ವಿಶ್ರಾಂತಿ ಅಗತ್ಯ ಇರುವುದರಿಂದ ಶ್ರೀಗಳ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ನೀಡದಿರಲು ವೈದ್ಯರು ಸಲಹೆ ನೀಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಶ್ರೀಗಳು ಸಂಪೂರ್ಣವಾಗಿ ಗುಣಮುಖರಾಗುವವರೆಗೆ ಭಕ್ತಾದಿಗಳು ಸಹಕರಿಸಬೇಕು ಎಂದು ಶ್ರೀಮಠ ಮನವಿ ಮಾಡಿದೆ.
ಶ್ರೀಗಳು ಇಂದು ಬೆಳಿಗ್ಗೆ ಸ್ವಲ್ಪ ತಡವಾಗಿ ಎಂದಿನಂತೆ ಇಷ್ಠಲಿಂಗ ಪೂಜಾ ಕೈಂಕರ್ಯವನ್ನು ಸಹ ನೆರವೇರಿಸಿದರು.

ಸಿದ್ದಲಿಂಗಶ್ರೀ ಹೇಳಿಕೆ
ಕಳೆದ ರಾತ್ರಿ ಶ್ರೀಗಳಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ವೈದ್ಯರು ಚಿಕಿತ್ಸೆ ನೀಡಿದ್ದು, ಈಗ ಆರಾಮಾಗಿದ್ದಾರೆ. ಸದ್ಯ ಯಾವುದೇ ತೊಂದರೆಯಿಲ್ಲ. ಭಕ್ತರು ತಾಳ್ಮೆಯಿಂದ ಇರಬೇಕು. ಯಾವುದೇ ರೀತಿಯಲ್ಲೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಶ್ರೀಗಳ ದರ್ಶನಕ್ಕೆ ಸ್ವಲ್ಪ ದಿನ ಕಾಯುವುದು ಒಳ್ಳೆಯದು ಎಂದು ಶ್ರೀಮಠದ ಕಿರಿಯ ಶ್ರೀಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮನವಿ ಮಾಡಿದ್ದಾರೆ.

ಶ್ರೀಗಳಿಗೆ ಚಿಕಿತ್ಸೆ ನೀಡಿರುವ ವೈದ್ಯರು ಏನು ತೊಂದರೆಯಿಲ್ಲ ಎಂದು ಹೇಳಿದ್ದಾರೆ. ಶ್ರೀಗಳು ಸಂಪೂರ್ಣ ವಿಶ್ರಾಂತಿ ಪಡೆದರೆ ಶೀಘ್ರ ಗುಣಮುಖರಾಗುತ್ತಾರೆ ಎಂಬುದು ವೈದ್ಯರ ಆಶಯವಾಗಿದೆ. ಹಾಗಾಗಿ ಭಕ್ತಾದಿಗಳು ಸಹಕರಿಸಬೇಕು ಎಂದು ಕೋರಿದ್ದಾರೆ.

ಡಾ. ಪರಮೇಶ್ ಹೇಳಿಕೆ
ನಿನ್ನೆ ರಾತ್ರಿ ಶ್ರೀಗಳ ಹೃದಯ ಬಡಿತದಲ್ಲಿ ಕೊಂಚ ಏರುಪೇರಾಗಿತ್ತು. ಸ್ವಲ್ಪ ಜ್ವರ ಸಹ ಕಂಡಿತ್ತು. ಹಾಗಾಗಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ಡಾ. ರವೀಂದ್ರ ವೈದ್ಯರ ತಂಡ ಚಿಕಿತ್ಸೆ ನೀಡಿ ಹೋಗಿದೆ. ತೊಂದರೆ ಏನಿಲ್ಲ. ಸ್ವಾಮೀಜಿ ಆರೋಗ್ಯವಾಗಿದ್ದಾರೆ ಎಂದು ಶ್ರೀಗಳ ಆಪ್ತ ವೈದ್ಯರಾದ ಡಾ. ಪರಮೇಶ್ ಹೇಳಿದರು.

ಸ್ಟಂಟ್ ಆಳವಡಿಕೆ‌ ವಿಚಾರದಲ್ಲಿ ನುರಿತ ವೈದ್ಯರ ಸಲಹೆಗಳನ್ನು ಪಡೆಯಬೇಕಿದೆ. ಹಾಗಾಗಿ ಮದರಾಸಿನ ಡಾ. ಮಹಮದ್ ರಿಲ್ಲಾ,  ತಮಿಳುನಾಡು ಮೂಲದ ಪಳನಿ ವೇಲುರವರ ಸಲಹೆ ಪಡೆಯಬೇಕಿದೆ. ನಮ್ಮ ವೈದ್ಯರ ತಂಡವೇ ಮದರಾಸ್ ಹಾಗೂ ತಮಿಳುನಾಡಿಗೆ ತೆರಳಿ ಅವರ ಅಭಿಪ್ರಾಯ ಪಡೆಯುತ್ತೇವೆ. ಸದ್ಯ ಸ್ವಾಮೀಜಿ ಅವರನ್ನು ಶಿಫ್ಟ್ ಮಾಡಲ್ಲ ಈಗಾಗ್ಲೇ ‍11 ಸ್ಟಂಟ್ ಆಳವಡಿಸಲಾಗಿದೆ. ಆ ಸ್ಟಂಟ್‌ಗಳನ್ನು ತೆಗೆಯುವುದು ಬಹಳಷ್ಟು ಕಷ್ಟ. ಅದಕ್ಕೆ ನುರಿತ ವೈದ್ಯರ ಸಲಹೆ ಪಡೆಯುತ್ತೇವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಸರ್ಜರಿ ಮುಖಾಂತರ ಸ್ಟಂಟ್ ತೆಗೆಯಬಹುದಾ ಅಥವಾ ಬೇರೆನಾದ್ರೂ ಮಾಡಬಹುದಾ ಎಂದು ಚರ್ಚೆ ಮಾಡ್ತೇವೆ. ಎಂಡಸ್ಕೋಪಿ ಮುಖಾಂತರ ಏನಾದರೂ ಮಾಡಬಹುದಾ ಎಂದು ಅಭಿಪ್ರಾಯ ಪಡೆಯುತ್ತೇವೆ ಎಂದು ಹೇಳಿದರು.

Leave a Comment