ಸಿಟಿ ಬಸ್ ಪಲ್ಟಿ

ಮೂವರು ಗಂಭೀರ ೩೫ಕ್ಕೂ ಹೆಚ್ಚು ಮಂದಿಗೆ ಗಾಯ
ಮಂಗಳೂರು, ಸೆ.೧೧- ಮುಂದಿದ್ದ ವಾಹನವನ್ನು ಓವರ್‌ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ಕಳೆದುಕೊಂಡ ಖಾಸಗಿ ಸಿಟಿ ಬಸ್ ಪಲ್ಟಿಯಾದ ಘಟನೆ ಇಂದು ಬೆಳಗ್ಗೆ ನಗರದ ಹೊರವಲಯದ ಬೈಕಂಪಾಡಿ ರೈಲ್ವೇ ಬ್ರಿಡ್ಜ್ ಬಳಿ ನಡೆದಿದೆ. ಬಸ್‌ನಲ್ಲಿದ್ದ ೩೫ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು ಅವರಲ್ಲಿ ೩ ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮುಂಜಾನೆ ೭ ಗಂಟೆಗೆ ಕುತ್ತೆತ್ತೂರಿನಿಂದ ಹೊರಟು ಕಾಟಿಪಳ್ಳ-ಕೈಕಂಬ ಮಾರ್ಗವಾಗಿ ನಗರಕ್ಕೆ ಬರುತ್ತಿದ್ದ ೪೫ಡಿ ನಂಬ್ರದ ಸೈಂಟ್ ಅಂಟೋನಿ ಹೆಸರಿನ ಬಸ್ ಬೈಕಂಪಾಡಿ ಜಂಕ್ಷನ್ ದಾಟಿ ಮುಂದುವರಿಯುತ್ತಿದ್ದಂತೆ ಅಪಘಾತಕ್ಕೀಡಾಗಿದೆ. ಅತೀವೇಹ ಮತ್ತು ಅಜಾಗರೂಕತೆಯಿಂದ ಬಸ್ ಚಲಾಯಿಸಿದ ಚಾಲಕ ಏಕಾಏಕಿ ಮುಂಭಾಗದಲ್ಲಿದ್ದ ವಾಹನವನ್ನು ಓವರ್‌ಟೇಕ್ ಮಾಡಲು ಮುಂದಾಗಿದ್ದು ಈ ವೇಳೆ ಬಸ್ ರಸ್ತೆ ಪಕ್ಕವೇ ಪಲ್ಟಿ ಹೊಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದು ೩೫ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯಗಳಾಗಿವೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯರು ಬಸ್ಸಿನಿಂದ ಹೊರಕ್ಕೆಳೆದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೆಳಗ್ಗಿನ ವೇಳೆಯಾದ್ದರಿಂದ ಶಾಲೆ, ಕಾಲೇಜ್ ವಿದ್ಯಾರ್ಥಿಗಳು ಬಸ್‌ನಲ್ಲಿ ಹೆಚ್ಚಾಗಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯ ಬಗ್ಗೆ ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಚಲಾಯಿಸುತ್ತಿದ್ದ ಚಾಲಕನ ವಿರುದ್ಧ ಈಗಾಗಲೇ ಸಂಚಾರಿ ಠಾಣೆಯಲ್ಲಿ ಓವರ್‌ಸ್ಪೀಡ್, ರಾಂಗ್ ರೂಟ್ ಸೇರಿದಂತೆ ಹತ್ತಾರು ಪ್ರಕರಣಗಳು ದಾಖಲಾಗಿತ್ತು ಎನ್ನಲಾಗಿದೆ.
ಮೊಬೈಲ್ ಕದ್ದರು!
ಅಪಘಾತ ಸಂದರ್ಭ ಸಿಟಿ ಬಸ್ಸಿನಲ್ಲಿ ಕಿಕ್ಕಿರಿದು ಪ್ರಯಾಣಿಕರು ತುಂಬಿದ್ದರು. ಬಸ್ ಪಲ್ಟಿಯಾದ ವೇಳೆ ಹಲವರು ರಸ್ತೆಗೆಸೆಯಲ್ಪಟ್ಟರೆ ಇನ್ನುಳಿದವರು ಬಸ್ಸೊಳಗೆ ಸಿಲುಕಿದ್ದರು. ಇವರನ್ನು ರಕ್ಷಿಸುವ ವೇಳೆ ಕೆಲ ವಿಕೃತಮನಸ್ಕರು ಬೆಲೆಬಾಳುವ ಮೊಬೈಲ್ ಫೋನ್‌ಗಳನ್ನು ಕದ್ದ ಘಟನೆಯೂ ಬೆಳಕಿಗೆ ಬಂದಿದೆ. ಹತ್ತಾರು ಮೊಬೈಲ್ ಫೋನ್‌ಗಳು ನಾಪತ್ತೆಯಾಗಿದ್ದು ಕಳೆದುಕೊಂಡವರು ಎಲ್ಲಾದರೂ ಬಿದ್ದಿದೆಯೇ ಎಂದು ಹುಡುಕುತ್ತಿದ್ದ ದೃಶ್ಯ ಕಂಡುಬಂತು. ಅಪಘಾತದ ಸಂದರ್ಭದಲ್ಲೂ ಇಂಥ ವಿಕೃತಿ ಪ್ರದರ್ಶಿಸಿ ಅಮಾನವೀಯವಾಗಿ ವರ್ತಿಸುವವರ ವಿರುದ್ಧ ಪ್ರಯಾಣಿಕರು ಆಕ್ರೊಶ ವ್ಯಕ್ತಪಡಿಸುತ್ತಿದ್ದರು.

Leave a Comment