ಸಿಗಡಿ ಸೀನನಿಗೆ ಗುಂಡಿಕ್ಕಿ ಸೆರೆ

ಬೆಂಗಳೂರು, ಫೆ 16- ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿ ದಾಂಧಲೆ ನಡೆಸುತ್ತಿದ್ದ ಕುಖ್ಯಾತ ಕಿಡಿಗೇಡಿ ಶ್ರೀನಿವಾಸ್ ಆಲಿಯಾಸ್ ಸಿಗಡಿ ಸೀನನಿಗೆ ಜಾಲಹಳ್ಳಿ ಪೊಲೀಸರು ಗುಂಡು ಹೊಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಗುಂಡೇಟು ತಗುಲಿ ಬಲಗಾಲಿಗೆ ಗಾಯಗೊಂಡಿರುವ ರಾಜಗೋಪಾಲ್ ನಗರದ ಕಪಿಲಾ ನಗರದ ಸಿಗಡಿ ಸೀನ (23) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬಂಧಿಸಲು ಹೋದಾಗ ಸಿಗಡಿ ಸೀನ ರಾಜಗೋಪಾಲ ನಗರದ ಪೊಲೀಸ್ ಪೇದೆ ವೀರಭದ್ರ ಅವರ ಕೈಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದು ಗಾಯಗೊಂಡಿರುವ ಅವರನ್ನು ಕೂಡ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಕಳೆದ ಫೆಬ್ರವರಿ 4 ರಂದು ಕಿರಣ್, ಮನೋಜ್ ಸೇರಿ 9 ಮಂದಿ ಗ್ಯಾಂಗ್ ಕಟ್ಟಿಕೊಂಡು ರಾಜಗೋಪಾಲ್ ನಗರದ ಮನೆಯ ಮುಂದೆ ನಿಲ್ಲಿಸಿದ್ದ 11 ಆಟೋಗಳು 4 ಕಾರುಗಳನ್ನು ಜಖಂಗೊಳಿಸಿ ಪರಾರಿಯಾಗಿದ್ದು ಈ ಸಂಬಂಧ ರಾಜಗೋಪಾಲ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಅಡಗಿದ್ದ ಸೀನ
ಕೃತ್ಯದಲ್ಲಿ ಭಾಗಿಯಾಗಿದ್ದ ಕಿರಣ್, ಹಾಗೂ ಮನೋಜ್ ಅನ್ನು ಬಂಧಿಸಿ ಪ್ರಮುಖ ಆರೋಪಿ ಸಿಗಡಿ ಸೀನನಿಗಾಗಿ ಹುಡುಕಾಟ ನಡೆಸಿದ್ದರು. ತಲೆಮರೆಸಿಕೊಂಡಿದ್ದ ಸೀನ ಕಳೆದ ಮಧ್ಯರಾತ್ರಿ ಜಾಲಹಳ್ಳಿ ಹಳೇ ಬಸ್ ನಿಲ್ದಾಣದ ಪ್ರೆಸ್ಟಿಜ್ ಅಪಾರ್ಟ್‌ಮೆಂಟ್ ಬಳಿಯ ಖಾಲಿ ಜಾಗದಲ್ಲಿ ಮದ್ಯ ಹಾಗೂ ಊಟ ತರಿಸಿಕೊಂಡು ಸೇವಿಸಿದ್ದ ಮಾಹಿತಿ ಲಭ್ಯವಾಯಿತು.
ಮುಂಜಾನೆ 6ರ ವೇಳೆ ರಾಜಗೋಪಾಲ ನಗರ ಪೊಲೀಸರು ಜಾಲಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ದಿನೇಶ್ ಪಾಟೀಲ್ ಅವರನ್ನು ಒಳಗೊಂಡು ಕಾರ್ಯಾಚರಣೆ ಕೈಗೊಂಡಾಗ ಪೊಲೀಸ್ ವಾಹನದ ಶಬ್ದ ಕೇಳಿ ಸಿಗಡಿ ಸೀನ ಪರಾರಿಯಾಗಲು ಯತ್ನಿಸಿದ್ದು ಆತನನ್ನು ಬೆನ್ನಟ್ಟಿ ಬಂಧಿಸಲು ವೀರಭದ್ರ ಪೇದೆ ಹೋಗಿದ್ದಾರೆ.
ಪೇದೆ ಮೇಲೆ ಹಲ್ಲೆ
ಅವರಿಂದ ತಪ್ಪಿಸಿಕೊಳ್ಳಲು ಚಾಕುವಿನಿಂದ ಸೀನ ಹಲ್ಲೆ ನಡೆಸಿದ್ದಾನೆ. ಈ ವೇಳೆ ಚಾಕುವನ್ನು ಬಿಟ್ಟು ಶರಣಾಗುವಂತೆ ಇನ್ಸ್‌ಪೆಕ್ಟರ್ ದಿನೇಶ್ ಪಾಟೀಲ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಸೂಚನೆ ನೀಡಿದ್ದರೂ ಮತ್ತೆ ಹಲ್ಲೆಗೆ ಮುಂದಾದಾಗ ಮತ್ತೊಂದು ಸುತ್ತು ಗುಂಡು ಹಾರಿಸಿದ್ದಾರೆ.
ಆ ಗುಂಡು ಬಲಗಾಲಿಗೆ ತಗುಲಿ ಸ್ಥಳದಲ್ಲಿಯೇ ಸೀಗಡಿ ಕುಸಿದು ಬಿದ್ದಿದ್ದು ಆತನನ್ನು ಬಂಧಿಸಲಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಮಹಿಳೆಗಾಗಿ ದಾಂಧಲೆ
ರಾಜಗೋಪಾಲ ನಗರದಲ್ಲಿ ರಂಗನಾಥ ಎಂಬುವರು ಪತ್ನಿ ಸಮೇತ ವಾಸಿಸುತ್ತಿದ್ದು, ದಂಪತಿಯು ಕಿರಣ್ ಎಂಬ ಯುವಕನನ್ನು ಸಾಕಿಕೊಂಡಿದ್ದರು. ಆತನಿಂದ ರಂಗನಾಥ್ ಪತ್ನಿಯ ಮೊಬೈಲ್‌ನ್ನು ಹರೀಶ್ ಎಂಬಾತ ಪಡೆದುಕೊಂಡಿದ್ದ.
ಹರೀಶ್ ಜತೆಗಿದ್ದ ಸಿಗಡಿ ಸೀನ, ಕಿರಣ್, ಮನೋಜ್ ಸೇರಿ 9 ಮಂದಿ ಕಿಡಿಗೇಡಿಗಳು ಮಹಿಳೆಗೆ ಆಗಾಗ್ಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ಒಬ್ಬರಿಂದ ಒಬ್ಬರಂತೆ ಕರೆ ಮಾಡುತ್ತಿರುವುದು ರಂಗನಾಥ್‌ಗೆ ಗೊತ್ತಾಗಿ ದಂಪತಿ ನಡುವೆ ಜಗಳವುಂಟಾಗಿತ್ತು.
ಜಗಳದಿಂದ ಆಕ್ರೋಶಗೊಂಡ ರಂಗನಾಥ್ ಪತ್ನಿ ಮೇಲೆ ಹಲ್ಲೆ ಮಾಡಿ ಮನೆ ಬಿಟ್ಟು ಹೋಗಿದ್ದು, ನಂತರವೂ ಆಕೆಗೆ ಅಪರಿಚಿತ ಕರೆಗಳು ಬರುತ್ತಿದ್ದು, ಈ ವಿಚಾರವನ್ನು ಆಕೆ ಸಾಕಿಕೊಂಡಿದ್ದ ಕಿರಣ್‌ಗೆ ತಿಳಿಸಿದ್ದರು.
ವಾಹನಗಳ ಜಖಂ
ಆಕ್ರೋಶಗೊಂಡ ಕಿರಣ್, ಮಹಿಳೆಗೆ ಕರೆ ಮಾಡುತ್ತಿದ್ದವರಿಗೆ ಅವಾಜ್ ಹಾಕಿ ನಮ್ಮ ಪ್ರದೇಶಕ್ಕೆ ಬನ್ನಿ ಎಂದು ಬೆದರಿಕೆ ಹಾಕಿದ್ದ. ಇದರಿಂದ ರೊಚ್ಚಿಗೆದ್ದ ಸಿಗಡಿ ಸೀನನ ಗ್ಯಾಂಗ್, ಕಳೆದ ಫೆ. 4 ರಂದು ರಾತ್ರಿ ರಂಗನಾಥ್ ಮನೆ ಬಳಿ ಬಂದು ನೋಡಿದಾಗ ಮನೆಯಲ್ಲಿ ಯಾರು ಇರಲಿಲ್ಲ.
ಇದರಿಂದ ಆಕ್ರೋಶಗೊಂಡು ಅಲ್ಲಿ ನಿಲ್ಲಿಸಿದ್ದ 14 ಆಟೋ, 4 ಕಾರುಗಳನ್ನು ಜಖಂಗೊಳಿಸಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿ ರಾಜಗೋಪಾಲ ನಗರ ಪೊಲೀಸರು ತನಿಖೆ ಕೈಗೊಂಡು, ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದರು.

ರಾಜಗೋಪಾಲ ನಗರದ ಬಳಿ ನಿಲ್ಲಿಸಿದ್ದ 11 ಆಟೋ, 4 ಕಾರು ಸೇರಿ 15 ವಾಹನಗಳನ್ನು ಜಖಂಗೊಳಿಸಿ ದಾಂಧಲೆ ನಡೆಸಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಚಿಸಲಾಗಿದ್ದ ಜಾಲಹಳ್ಳಿ-ರಾಜಗೋಪಾಲ ನಗರದ ವಿಶೇಷ ಪೊಲೀಸ್ ತಂಡ ಇಂದು ಮುಂಜಾನೆ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಸಿಗಡಿ ಸೀನನಿಗೆ ಗುಂಡು ಹೊಡೆದು ಬಂಧಿಸಿ ತನಿಖೆ ಕೈಗೊಂಡಿದೆ.
ಶಶಿಕುಮಾರ್
ಡಿಸಿಪಿ ಉತ್ತರ ವಿಭಾಗ

Leave a Comment