ಸಿಐಜಿಗೆ ಸ್ವಾಯತ್ತತೆ ನ್ಯಾ. ಗೋಗಾಯ್ ಪ್ರತಿಪಾದನೆ

ನವದೆಹಲಿ, ಆ. ೧೪- ಕೇಂದ್ರೀಯ ತನಿಖಾ ದಳಕ್ಕೆ ಸಿಎಜಿ ಮಾದರಿಯಲ್ಲೇ ಸ್ವಾಯತ್ತತೆ ಸ್ಥಾನಮಾನ ನೀಡುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾ. ರಂಜನ್ ಗೋಗಾಯ್ ಹೇಳಿದರು.
ಸಿಬಿಐನ ಸಮಗ್ರ ಆಡಳಿತದ ಸರ್ಕಾರದ ನಿಯಂತ್ರಣದಿಂದ ಮುಕ್ತವಾಗಬೇಕು. ಸಿಬಿಐಗೆ ಸ್ವಾಯತ್ತತೆ ಸ್ಥಾನಮಾನ ನೀಡಬೇಕಿದೆ ಎಂದು ಅವರು ಹೇಳಿದರು.
ದೆಹಲಿಯ ವಿಜ್ಞಾನ ಭವನದಲ್ಲಿ ನಿನ್ನೆ ಸಿಬಿಐ ಸಿಬ್ಬಂದಿಗೆ ಅವರ ಶ್ಲಾಘನೀಯ ಸೇವೆಗಾಗಿ ಪದಕ ಪ್ರದಾನ ಮಾಡಿ ಮಾತನಾಡಿದ ಅವರು, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರಿಗೆ ನೀಡಿರುವ ಸ್ವಾಯತ್ತತೆಯನ್ನು ಸಿಬಿಐಗೂ ನೀಡಲು ಶಾಸನ ಬದ್ಧ ಅಧಿಕಾರ ನೀಡಬೇಕು ಎಂದು ಹೇಳಿದರು.
ಸಿಬಿಐನ್ನು ರಾಜಕೀಯ ಉಪಕರಣವಾಗಿ ಬಳಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಹಲವು ಸಂದರ್ಭಗಳಲ್ಲಿ ಸಿಬಿಐನ ರಾಜಕೀಯ ದಾಳವಾಗಿ ಬಳಸಲಾಗಿದೆ. ಹಾಗಾಗಿ ಸಿಬಿಐಗೆ ಹೆಚ್ಚಿನ ಸ್ವಾಯತ್ತತೆ ಅಗತ್ಯವಿದೆ ಎಂದರು.
ರಾಜಕೀಯ ಪ್ರಕರಣಗಳಲ್ಲಿ ಸಿಬಿಐ ನ್ಯಾಯಾಂಗದ ಸಮಗ್ರ ಶೋಧನೆಯ ಮಟ್ಟಕ್ಕೆ ನಿಲುಕುವಲ್ಲಿ ವಿಫಲವಾಗಿದೆ. ಅದು ಏಕೋ ಏನೋ ರಾಜಕೀಯ ಪ್ರಕರಣಗಳಲ್ಲಿ ಸಿಬಿಐನ ತನಿಖೆ ಸೊರಗಿದೆ ಎಂದು ಅವರು ಹೇಳಿದರು.
ರಾಜಕೀಯ ಪ್ರಕರಣಗಳನ್ನು ಹೊರತುಪಡಿಸಿದರೆ ಉಳಿದ ಪ್ರಕರಣಗಳಲ್ಲಿ ಸಿಬಿಐನ ತನಿಖೆ ಅತ್ಯುತ್ತಮ ಮಟ್ಟದ್ದಾಗಿದೆ ಎಂದು ಮುಖ್ಯ ನ್ಯಾ. ಗೋಗಾಯ್ ಹೇಳಿದರು.
ಸಿಬಿಐ ತನಿಖೆ ನಡೆಸುತ್ತಿರುವ ಹಿರಿಯ ರಾಜಕೀಯ ನಾಯಕರು, ಮಾಜಿ ಮುಖ್ಯಮಂತ್ರಿಗಳ ಮೇಲಿನ ಆರೋಪಗಳ ಪ್ರಕರಣದ ತನಿಖೆ ಹಲವು ವರ್ಷಗಳಿಂದ ಬಾಕಿ ಉಳಿದಿವೆ. ಅದು ಏಕೋ ಏನೋ ತನಿಖೆ ವಿಳಂವಾಗುತ್ತಿದೆ ಎಂದು ಅವರು ಹೇಳಿದರು.
ಈ ಹಿಂದೆಯೆಲ್ಲಾ ನ್ಯಾಯ ಬೇಕು ಎನ್ನುವವರು ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದರೂ ಅಷ್ಟರ ಮಟ್ಟಿಗೆ ಸಿಬಿಐ ಜನರ ನಂಬಿಕೆ, ವಿಶ್ವಾಸ ಗಳಿಸಿತ್ತು. ಹಾಗಾಗಿ ಜನರ ನಂಬಿಕೆ ವಿಶ್ವಾಸಗಳನ್ನು ಉಳಿಸಿಕೊಂಡು ಸಿಬಿಐ ತನ್ನ ಗುಣಮಟ್ಟದ ತನಿಖೆಯನ್ನು ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ಇದು ದೇಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

Leave a Comment