ಸಿಎಎ ವಿರುದ್ಧ ನಿರ್ಣಯ ಹೊರಡಿಸುವಂತೆ ಆಗ್ರಹ; ಚೆನ್ನೈನಲ್ಲಿ ಸಾವಿರಾರು ಮುಸ್ಲಿಮರಿಂದ ಪ್ರತಿಭಟನಾ ಮೆರವಣಿಗೆ

ಚೆನ್ನೈ(ಫೆ. 19): ತಮಿಳುನಾಡಿನಲ್ಲಿ ಸಿಎಎ ವಿರುದ್ಧ ತೀವ್ರ ಪ್ರತಿಭಟನೆಗಳು ಮುಂದುವರಿದಿವೆ. ಇಂದು ಕಲೈನಾರ್ ಆರಂಗಂನಿಂದ ಚೇಪಾಕ್ ಬಳಿ ಇರುವ ಸಚಿವಾಲಯದವರೆಗೂ ವಿವಿಧ ಮುಸ್ಲಿಮ್ ಸಂಘಟನೆಗಳಿಗೆ ಸೇರಿದ ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರುದ್ಧ ತಮಿಳುನಾಡಿನ ಎಐಎಡಿಎಂಕೆ ಸರ್ಕಾರ ನಿರ್ಣಯ ಹೊರಡಿಸಬೇಕು. ರಾಜ್ಯದಲ್ಲಿ ಎನ್ಆರ್ಸಿ ಜಾರಿ ಮಾಡಲು ಅವಕಾಶ ನೀಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ರಾಜ್ಯ ಸರ್ಕಾರ ಈ ನಿರ್ಣಯ ಹೊರಡಿಸುವವರೆಗೂ ತಾವೆಲ್ಲರೂ ಪ್ರತಿಭಟನೆಗಳನ್ನು ಮುಂದುವರಿಸುತ್ತೇವೆ ಎಂದು ಪ್ರತಿಭಟನಾಕಾರರು ಪಣತೊಟ್ಟಿದ್ದಾರೆ.

ಸಚಿವಾಲಯಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಬಾರದು ಎಂದು ಮದ್ರಾಸ್ ಹೈಕೋರ್ಟ್ ನೀಡಿದ ಆದೇಶವನ್ನೂ ಲೆಕ್ಕಿಸದೇ ಈ ಪ್ರತಿಭಟನೆಗಳು ನಡೆದಿವೆ. ವಿಪಕ್ಷಗಳಾದ ಡಿಎಂಕೆ, ಸಿಪಿಐ ಮೊದಲಾದವುಗಳಿಂದಲೂ ಈ ಪ್ರತಿಭಟನೆಗೆ ಬೆಂಬಲ ಸಿಕ್ಕಿದೆ.

ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ. ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ನಮ್ಮ ಹೋರಾಟ ಇರುವುದು ಸಿಎಎ ಮತ್ತು ಎನ್ಆರ್ಸಿ ವಿರುದ್ಧ. ಎಐಎಡಿಎಂಕೆ ಸರ್ಕಾರ ನಮ್ಮ ಭಾವನೆಗಳನ್ನ ಅರ್ಥ ಮಾಡಿಕೊಳ್ಳುತ್ತದೆಂದು ನಾವು ಆಶಿಸುತ್ತೇವೆ’ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಸಂಘರ್ಷ ನಡೆದಿ ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿ ನ್ಯಾ| ಎಂ ಸತ್ಯನಾರಾಯಣ ಮತ್ತು ನ್ಯಾ| ಆರ್ ಹೇಮಲತಾ ಅವರಿದ್ದ ಹೈಕೋರ್ಟ್ ನ್ಯಾಯಪೀಠವು ಇವತ್ತಿನ ಪ್ರತಿಭಟನೆಗೆ ಅವಕಾಶ ಮಾಡಿಕೊಡಬಾರದೆಂದು ತೀರ್ಪು ನೀಡಿತ್ತು.

ಕೋರ್ಟ್ ಆದೇಶವನ್ನು ಲೆಕ್ಕಿಸದೇ ನಡೆದ ಈ ಪ್ರತಿಭಟನೆ ಚೆನ್ನೈ ನಗರದ ಕೆಲ ರಸ್ತೆಗಳಲ್ಲಿ ವಾಹನ ದಟ್ಟನೆಗೆ ಕಾರಣವಾಯಿತು. ನಗರದ ಪ್ರಮುಖ ರಸ್ತೆಯಾಗಿರುವ ಮೌಂಟ್ ರೋಡ್ ಬಹುತೇಕ ಬ್ಲಾಕ್ ಆಗಿದೆ.

ವಾರದ ಹಿಂದೆ ನಡೆದ ಪ್ರತಿಭಟನೆಯಲ್ಲಿ ಜನರು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದರು. ಪೊಲೀಸರ ಮೇಲೆ ಕಲ್ಲುಗಳನ್ನ ಎಸೆದು ಆಕ್ರೋಶ ಹೊರಹಾಕಿದ್ದರು. ಈ ಘಟನೆಯು ರಾಜಕೀಯ ಕುಮ್ಮಕ್ಕಿನಿಂದ ನಡೆದಿದೆ ಎಂದು ತಮಿಳುನಾಡ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಆರೋಪಿಸಿದ್ದರು.

ಇದೆ ವೇಳೆ, ಚೆನ್ನೈನ ಉತ್ತರ ಭಾಗದಲ್ಲಿರುವ ಓಲ್ಡ್ ವಾಷರ್ಮ್ಯಾನ್ಪೇಟ್ ಬಳಿ ನಡೆಸಲಾಗುತ್ತಿರುವ ಪ್ರತಿಭಟನೆಗಳು ಆರನೇ ದಿನಕ್ಕೆ ಕಾಲಿಟ್ಟಿವೆ. ತಮಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆಗಳನ್ನು ಕೈಬಿಡುವುದಿಲ್ಲ ಎಂದು ಈ ಜನರು ಹೇಳುತ್ತಿದ್ದಾರೆ.

Leave a Comment