ಸಿಎಂ ಸ್ಥಾನ ಭದ್ರಕ್ಕೆ ಹೈಕಮಾಂಡ್‌ಗೆ 1 ಸಾವಿರ ಕೋಟಿ

ದಿ.20 ಭ್ರಷ್ಟ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ
ರಾಯಚೂರು.ಫೆ.17- ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಭ್ರಷ್ಟಾಚಾರದ ವಿರುದ್ಧ ದಿ.20 ರಂದು ಜಿಲ್ಲೆಯಾದ್ಯಂತ ಪಕ್ಷದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎನ್.ಶಂಕ್ರಪ್ಪ ತಿಳಿಸಿದರು.

ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಜನ ರೋಸಿಹೋಗಿದ್ದಾರೆ. ಆಡಳಿತಯಂತ್ರ ಸಂಪೂರ್ಣ ಕುಸಿದು ಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟದ ಹಲವು ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪಗಳಿದ್ದರೂ, ಸಚಿವ ಸ್ಥಾನದಿಂದ ಕೈಬಿಡದೆ ಮುಖ್ಯಮಂತ್ರಿ ಮೊಂಡುತನ ಪ್ರದರ್ಶಿಸುತ್ತಿರುವುದು ಖಂಡನೀಯ.

ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್‌ಗೆ 1 ಸಾವಿರ ಕೋಟಿ ರೂ. ಕಪ್ಪುಹಣ ನೀಡಿರುವ ಕುರಿತು ಶಾಸಕ ಗೋವಿಂದರಾಜು ಅವರ ಮನೆಯ ಮೇಲೆ ಐಟಿ ದಾಳಿಯಲ್ಲಿ ದೊರೆತ ಡೈರಿಯಲ್ಲಿ ಪತ್ತೆಯಾಗಿದೆ. ಭ್ರಷ್ಠಾಚಾರದಲ್ಲಿ ಶಾಮೀಲಾದ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಮೀನಾಮೇಷವೆಣಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಿಸುವುದರಿಂದ ಪರಿಸರಕ್ಕೆ ಮಾರಕವಾಗಲಿದೆ ಎಂದು ಹಸಿರು ನ್ಯಾಯಪೀಠ ತೀರ್ಪು ನೀಡಿದೆ.

ಆದರೆ, ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಆಪ್ತರಿಗೆ 65 ಕೋಟಿ ರೂ. ಕಪ್ಪುಹಣ ನೀಡಿದ್ದಾರೆ. ಇತ್ತೀಚಿಗೆ ಬೆಳಗಾವಿಯಲ್ಲಿ ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಹಿಳಾ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮ ಆಸ್ತಿ ಹೊಂದಿದ 165 ಕೋಟಿ ರೂ. ಹಣ ವಶ ಹಾಗೂ 14 ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ ಎಂದರು.
ಸರ್ಕಾರದಲ್ಲಿ ಭ್ರಷ್ಟ ಸಚಿವರು, ಅಧಿಕಾರಿಗಳಿಂದ ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದೆ. ಮುಖ್ಯಮಂತ್ರಿಗಳು ಇತ್ತೀಚಿಗೆ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತಕುಮಾರ ಅವರು ಹೈಕಮಾಂಡ್‌ಗೆ ಕಪ್ಪುಹಣ ರವಾನಿಸಿರುವುದಾಗಿ ಸುಳ್ಳು ಹೇಳಿಕೆ ನೀಡಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಆದರೆ, ಇದರಲ್ಲಿ ಬಿಜೆಪಿ ನಾಯಕರು ಶಾಮೀಲಾಗಿಲ್ಲ. ಬೇರೆಯವರು ದೃಶ್ಯಾವಳಿ ಸೆರೆಹಿಡಿದ್ದಾರೆ.

ಕಾಂಗ್ರೆಸ್ ಸರ್ಕಾರದಿಂದ ಶಾಸಕರು ಬೇಸತ್ತು,, ಬಿಜೆಪಿ ಪಕ್ಷಕ್ಕೆ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ನಂಜನಗೂಡು ಕ್ಷೇತ್ರದ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರೆ, ಮುಖ್ಯಮಂತ್ರಿಗಳ ಕಾರ್ಯಕ್ಷಮತೆ ಕುರಿತು ಜನ ಬೇಸತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕೆಂದು ಜನ ನಿರೀಕ್ಷಿಸುತ್ತಿದ್ದಾರೆ. ರಾಜ್ಯದಲ್ಲಿ ಭೀಕರ ಬರ ಆವರಿಸಿರುವುದರಿಂದ ಕೇಂದ್ರದಿಂದ ಬಿಡುಗಡೆಯಾದ ಹಣ ರೈತರಿಗೆ ಪರಿಹಾರ ವಿತರಿಸಿ, ಮೇವು ಕೇಂದ್ರ ಹಾಗೂ ಗೋಶಾಲೆ ಕೇಂದ್ರ ಆರಂಭಿಸುವಲ್ಲಿ ಸರ್ಕಾರ ವಿಫಲಗೊಂಡಿದೆ.

ಮಾಜಿ ಶಾಸಕ ಎ.ಪಾಪಾರೆಡ್ಡಿ ಮಾತನಾಡಿ, ವಾರ್ಡ್ 34 ರ ಯಕ್ಲಾಸಪೂರು ಬಡಾವಣೆಯಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಬಿಜೆಪಿ ತೀರಾ ವಿರೋಧ ವ್ಯಕ್ತಪಡಿಸುತ್ತದೆ. ಈ ನಿಟ್ಟಿನಲ್ಲಿ ಈಗಿರುವ ಜಿಲ್ಲಾಧಿಕಾರಿಗಳ ಕಚೇರಿ ಬಳಿಯೇ ಜಿಲ್ಲಾಡಳಿತ ಭವನ ನಿರ್ಮಿಸಬೇಕು. ಹಳೆ ಜಿಲ್ಲಾಸ್ಪತ್ರೆ ಆವರಣದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಆರೋಗ್ಯ ಇಲಾಖೆ ಸಮ್ಮತಿಸಿದೆ ಎಂದರು. ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಜೆ.ಶರಣಪ್ಪಗೌಡ ಜಾ‌ಡಲದಿನ್ನಿ, ಆರ್.ತಿಮ್ಮಯ್ಯ, ಮಾಜಿ ಶಾಸಕ ಗಂಗಾಧರ್ ನಾಯಕ, ಶಿವಬಸ್ಸಪ್ಪ ಮಾಲಿ ಪಾಟೀಲ್, ಕೆ.ಎಂ. ಪಾಟೀಲ್, ಶಶಿರಾಜ ಮಸ್ಕಿ ಉಪಸ್ಥಿತರಿದ್ದರು.

Leave a Comment