ಸಿಎಂ ವಿರುದ್ಧ ಬಿಎಸ್‌ವೈ ವಾಗ್ದಾಳಿ

ಬೆಂಗಳೂರು, ಜೂ. ೧೮- ಜಿಂದಾಲ್ ಕಂಪನಿಯಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು 20 ಕೋಟಿ ರೂ. ಹಣವನ್ನು ಚೆಕ್ ಮೂಲಕ ಪಡೆದಿದ್ದರು ಎಂದು ಆರೋಪಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ, ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ. ವಿಜಯೇಂದ್ರ ಹರಿಹಾಯ್ದಿದ್ದಾರೆ.
ಮುಖ್ಯಮಂತ್ರಿ ಸ್ಥಾನದಲ್ಲಿದ್ದು, ಈ ರೀತಿ ಒಣಗೇಡಿತನದ ಮಾತನಾಡುವುದು ಸರಿಯಲ್ಲ. ಸಿಬಿಐ ನ್ಯಾಯಾಲಯ ನನ್ನನ್ನು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿದೆ. ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವಂತೆ ಹಗುರವಾಗಿ ಮಾತನಾಡಬೇಡಿ ಎಂದು ಯಡಿಯೂರಪ್ಪ ಟ್ವೀಟರ್‌ನಲ್ಲಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಆಡಳಿತದಲ್ಲಿ ಸಂಪೂರ್ಣ ವಿಫಲರಾಗಿ ದಿಕ್ಕೆಟ್ಟಿರುವ ನೀವು ನಿಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಬೇಡಿ ಎಂದು ಯಡಿಯೂರಪ್ಪ ಕುಮಾರಸ್ವಾಮಿ ಅವರಿಗೆ ಟ್ವೀಟ್‌ನಲ್ಲಿ ಹೇಳಿದ್ದಾರೆ.
 ವಿಜಯೇಂದ್ರ ಟ್ವೀಟ್
ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಯಡಿಯೂರಪ್ಪನವರ ಪುತ್ರ ಹಾಗೂ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯಂದ್ರ ಸಹ ಟ್ವೀಟರ್‌ನಲ್ಲಿ ಹರಿಹಾಯ್ದಿದ್ದು, ಕುಮಾರಸ್ವಾಮಿ ಅವರು ಹಿಟ್ ಅಂಡ್ ರನ್ ಸಂಸ್ಕೃತಿಯಿಂದ ಹೊರಬರಲಿ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಯಡಿಯೂರಪ್ಪ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕುಮಾರಸ್ವಾಮಿ ಅವರು ಸಿಎಂ ಹುದ್ದೆಯ ಘನತೆ ಕಾಪಾಡಿಕೊಳ್ಳಲಿ. ಜನರಿಗೆ ಸುಳ್ಳು ಭರವಸೆ ನೀಡಿ ದಾರಿ ತಪ್ಪಿಸಿದ್ದಾಯಿತು ಈಗ ಸುಳ್ಳು ಆರೋಪಗಳನ್ನು ಮತ್ತೆ ನಡೆಸಿದ್ದಾರೆ ಎಂದು ಅವರು ಟ್ವೀಟರ್‌ನಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿನ್ನೆ ಚನ್ನಪಟ್ಟಣದಲ್ಲಿ ಜಿಂದಾಲ್ ಭೂಮಿ ಪರಭಾರೆಗೆ ಸಂಬಂಧಿಸಿದಂತೆ ಕಿಕ್‌ಬ್ಯಾಕ್ ಆರೋಪ ಮಾಡಿರುವ ಯಡಿಯೂರಪ್ಪ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಜಿಂದಾಲ್ ಕಂಪೆನಿಯಿಂದ 20 ಕೋಟಿ ರೂ. ಹಣವನ್ನು ಚೆಕ್ ಮೂಲಕ ಪಡೆದಿದ್ದನ್ನು ನಾನೇ ಬಹಿರಂಗಪಡಿಸಿದ್ದೇ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.

Leave a Comment