ಸಿಎಂ ವಿರುದ್ದ ದೂರು; ರಾಜ್ಯಪಾಲ ಬಳಿ ಅನುಮತಿಗೆ ಮನವಿ

ದಾವಣಗೆರೆ,ಏ.15: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಪ್ರತ್ಯೇಕ 2 ಪ್ರಕರಣಗಳ ಹಗರಣ ಕುರಿತು ರಾಜ್ಯಪಾಲರಿಗೆ ದೂರು ನೀಡುವ ಸಲುವಾಗಿ ಅನುಮತಿ ಕೋರಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಹರೀಶ್‍ಹಳ್ಳಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಪಿಡಬ್ಲ್ಯೂಡಿ ಇಲಾಖೆಯಲ್ಲಿ 700 ಕೋಟಿಗೂ ಅಧಿಕ ಮೊತ್ತದ ಹಣವನ್ನು ಕಾಮಗಾರಿ ಪೂರ್ಣಗೊಳ್ಳುವ ಮುನ್ನ ಕೆಲವು ಜಿಲ್ಲೆಗಳ ಗುತ್ತಿಗೆದಾರರ ಖಾತೆಗೆ ಜಮೆ ಮಾಡಿದ್ದಾರೆ ಮತ್ತು ಕರ್ನಾಟಕ ಲೋಕಾಯುಕ್ತ ಇಲಾಖೆಯಲ್ಲಿ ದಾಖಲಾಗಿರುವ ಜಂತಕಲ್ ಮೈನಿಂಗ್ ಕಂಪನಿಗೆ ಸಂಬಂಧಿಸಿರುವ ಅಂತಿಮ ತನಿಖಾ ವರದಿಯನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜಂತಕಲ್ ಮೈನಿಂಗ್ ಸಂಬಂಧಿಸಿದ ತನಿಖಾ ವರದಿಯನ್ನು ನಾಶಪಡಿಸುತ್ತಿರುವ ಕುರಿತು ಫೆ.14, 2019ರಂದು ರಾಷ್ಟ್ರಪತಿಗಳಿಗೆ ಹಾಗೂ ಅಟಾರ್ನಿ ಜನರಲ್ ಅವರಿಗೆ ದೂರು ಸಲ್ಲಿಸಲಾಗಿದೆ. ಸದರಿ ದೂರಿಗೆ ಸಂಬಂಧಿಸಿದಂತೆ ಸರ್ಕಾರದ ಜನಸ್ಪಂದನ ಕೋಶ ವಿಭಾಗಕ್ಕೆ ದೂರು ಹಾಗೂ ಅಡಕಗಳನ್ನು ಕಳುಹಿಸಿಕೊಡುತ್ತಾ ಏ. 24ರೊಳಗೆ ಅತಿ ಜರೂರಾಗಿ ಕೈಗೊಂಡ ವರದಿಯನ್ನು ದೂರುದಾರನಿಗೆ ಹಾಗೂ ಇಲಾಖೆ ಕಳಿಸಿರುವ ದಾಖಲಾತಿಗಳನ್ನು ನಾಶಪಡಿಸಲು ಜನಸ್ಪಂದನ ಕೋಶದ ಅಧಿಕಾರಿಗಳಿಗೆ ಹಾಗೂ ಕರ್ನಾಟಕ ಲೋಕಾಯುಕ್ತ ಇಲಾಖೆಯ ರಿಜಿಸ್ಟರ್ ಅವರಿಗೆ ಒತ್ತಡ ತಂದಿದ್ದಾರೆ. ಈ ಪ್ರಕರಣದಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರು, ಪ್ರಮುಖ ಆರೋಪಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಮೇಲ್ಕಂಡ ಆರೋಪಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉತ್ತರ ನೀಡಬೇಕಿದೆ. ನಾನು ಮಾಡಿದ ಆರೋಪಕ್ಕೆ ಪೂರಕವಾದ ಎಲ್ಲಾ ದಾಖಲೆಗಳು ನಮ್ಮ ಬಳಿ ಇದೆ. ಈ ಬಗ್ಗೆ ಕಾನೂನು ಹೋರಾಟಕ್ಕೆ ನಾವು ಸಿದ್ದವಿದ್ದು, ಮುಖ್ಯಮಂತ್ರಿಗಳು ನಮ್ಮ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿದರೆ ಅದಕ್ಕೆ ನಾವು ಕಾನೂನು ರೀತಿಯ ಉತ್ತರವನ್ನು ಕೊಡಲು ಸಿದ್ದರಿದ್ದೇವೆ ಎಂದು ಸವಾಲು ಹಾಕಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಚನ್ನಗಿರಿಯ ಎಂ.ವಿ ವೀರಭದ್ರಪ್ಪ, ವೀರಾಚಾರ್ ತುರ್ಚಘಟ್ಟ, ಹೇಮರೆಡ್ಡಿ ಜಗಳೂರು, ಸಿ.ಎಂ ಮಂಜುನಾಥ್ ಇತರರಿದ್ದರು.

Leave a Comment