ಸಿಎಂ ರೇಸ್‌ನಲ್ಲಿ ಹೆಚ್‌ಸಿಎಂ ಕಾಂಗ್ರೆಸ್‌ನಲ್ಲಿ ಕಂಪನ

ಬೆಂಗಳೂರು, ಜ. ೧೨- ತಮ್ಮ ಪರಮಾಪ್ತ, ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರೂ ‘ಸಿಎಂ ರೇಸ್‌ನಲ್ಲಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಕಾಂಗ್ರೆಸ್ ವಲಯದಲ್ಲಿ ಹಲವು ಬಗೆಯ ವ್ಯಾಖ್ಯಾನಗಳಿಗೆ ಭೂಮಿಕೆಯಾಗಿದೆ ಅಷ್ಟೇ ಅಲ್ಲದೆ ಸಂಚಲನಕ್ಕೂ ಕಾರಣವಾಗಿದೆ.
ಮೈಸೂರಿನಲ್ಲಿ ನಿನ್ನೆ ನಡೆದ ಸರ್ಕಾರದ ಸಾಧನಾ ಸಂಭ್ರಮದ ಸಮಾವೇಶದಲ್ಲಿ ಸಿದ್ದರಾಮಯ್ಯ ದಿಢೀರನೆ ಈ ವಿಷಯ ಪ್ರಸ್ತಾಪಿಸಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿದೆ.
ದಲಿತ ಸಮುದಾಯದ ವಿಶೇಷವಾಗಿ ಬಲಗೈ ಗುಂಪಿಗೆ ಸೇರಿದ ಮಹದೇವಪ್ಪ ಅವರೂ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ ಕೂಡಲೇ ನಾನಾ ಬಗೆಯ ಚರ್ಚೆಗಳಿಗೆ ಗ್ರಾಸ ಒದಗಿಸಿದೆ.
‘ದಲಿತ ಮುಖ್ಯಮಂತ್ರಿ’ ಎಂಬ ಪ್ರಶ್ನೆ ಒಂದೆರಡು ವರ್ಷಗಳ ಹಿಂದೆ ಭಾರೀ ಸದ್ದು ಮಾಡಿತ್ತು. ಆದರೂ ಈ ವಿಷಯ ಅಷ್ಟೇ ವೇಗವಾಗಿ ತೆರೆಮರೆಗೆ ಸರಿದಿತ್ತು. ದಲಿತ ಮುಖ್ಯಮಂತ್ರಿ ವಿಷಯ ಚರ್ಚೆಗೆ ಬಂದಾಗ ದಲಿತ ಸಮುದಾಯದ ಬಲಗೈ ಗುಂಪಿಗೆ ಸೇರಿದ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಒಬ್ಬರಾದ ಅನುಭವಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಾ. ಜಿ. ಪರಮೇಶ್ವರ್ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬಂದಿದ್ದವು. ಸಂಸದ ಕೆ.ಎಚ್. ಮುನಿಯಪ್ಪ ಅವರ ಹೆಸರೂ ಪ್ರಸ್ತಾಪಕ್ಕೆ ಬಂದಿತ್ತು.
ಯಾವ ಮಟ್ಟಿಗೆ ಚರ್ಚೆ ತಲುಪಿತ್ತು ಎಂದರೆ, ಸಿದ್ದರಾಮಯ್ಯ ಅವರನ್ನು ಬದಲಿಸಿ ಖರ್ಗೆ ಅಥವಾ ಪರಮೇಶ್ವರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಮಾಡಲಿದೆ ಎಂಬ ಕೂಗು ಪ್ರಬಲವಾಗಿ ಕೇಳಿಬಂದಿತ್ತು. ಆದರೆ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಚಾಣಾಕ್ಷತನದಿಂದ ಈ ವಿಚಾರವನ್ನು ತಣ್ಣಗೆ ಮಾಡುವಲ್ಲಿ ಯಶಸ್ವಿಯೂ ಆಗಿದ್ದರು.
ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಇರುವ ಎಡಗೈ ಮತ್ತು ಬಲಗೈ ಗುಂಪಿನ ಸಚಿವರು ಹಾಗೂ ಶಾಸಕರನ್ನು ಮುಂದೆ ಮಾಡಿ ‘ಈ ವಿಚಾರ’ ಸದ್ಯಕ್ಕೆ ಅಪ್ರಸ್ತುತ ಎಂಬ ನಿಲುವಿಗೆ ಬರುವಂತೆ ಮಾಡಲಾಗಿತ್ತು.
ಇದೀಗ ದಿಢೀರನೆ ಸಿದ್ದರಾಮಯ್ಯ, ಡಾ. ಮಹದೇವಪ್ಪ ಅವರ ಹೆಸರನ್ನು ಹೇಳುವ ಮೂಲಕ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದು ದಲಿತರೊಬ್ಬರು ಮುಖ್ಯಮಂತ್ರಿಯಾಗಬೇಕು ಎಂಬ ಚರ್ಚೆ ನಡೆದರೆ, ಮಹದೇವಪ್ಪ ಅವರ ಹೆಸರನ್ನು ಆಕಾಂಕ್ಷಿಗಳ ಪಟ್ಟಿಯಲ್ಲಿ ಇರುವಂತೆ ಮಾಡುವುದು ಇದರ ಹಿಂದಿನ ಉದ್ದೇಶವಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಖರ್ಗೆ ಮತ್ತು ಪರಮೇಶ್ವರ್ ಅಥವಾ ಮುನಿಯಪ್ಪ ಅವರು ಮಾತ್ರವಲ್ಲದೆ, ಮಹದೇವಪ್ಪ ಅವರೂ ಮುಖ್ಯಮಂತ್ರಿಯಾಗಬೇಕು ಎಂದು ಕ್ಲೈಮ್ ಮಾಡಲು ಈಗಿನಿಂದಲೇ ವೇದಿಕೆ ಸಿದ್ಧವಾಗುತ್ತಿದೆಯೇ ಎಂಬ ಅನುಮಾನವೂ ಕಾಡಲಾರಂಭಿಸಿದೆ.
ಚುನಾವಣೆಗೆ ಇನ್ನೂ 4 – 5 ತಿಂಗಳು ಇರುವಾಗಲೇ ಮಹದೇವಪ್ಪ ಅವರ ಹೆಸರನ್ನು ಪ್ರಸ್ತಾಪಿಸುವ ಮೂಲಕ ಹೊಸದೊಂದು ಬಗೆಯ ಪ್ರಶ್ನೆಯನ್ನು ಸಿದ್ದರಾಮಯ್ಯ ಹುಟ್ಟುಹಾಕಿದ್ದಾರೆ ಎಂದರೂ ತಪ್ಪಾಗಲಾರದು.
ಪಕ್ಷವನ್ನು ಅಧಿಕಾರಕ್ಕೆ ತರಲು ಏಕಾಂಗಿಯಾಗಿ ಹೋರಾಟ ನಡೆಸಿರುವ ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತೆ ಕಾಂಗ್ರೆಸ್‌ಗೆ ಬಹುಮತ ಬಂದಲ್ಲಿ ತಮ್ಮ ಆಪ್ತ ಮಹದೇವಪ್ಪ ಅವರನ್ನು ಈ ಹುದ್ದೆಯಲ್ಲಿ ಪ್ರತಿಷ್ಠಾಪಿಸಲು ತಂತ್ರ ಹೆಣೆದಿದ್ದಾರೆಯೇ ಎಂಬ ಪ್ರಶ್ನೆಯೂ ಎದ್ದಿದೆ. ಇದಕ್ಕೆಲ್ಲಾ ಕಾಲವೇ ಉತ್ತರಿಸಲಿದೆ.

Leave a Comment