ಸಿಎಂ ಭೇಟಿಗೆ ಯತ್ನ ಚಾಕು ಹೊಂದಿದ್ದ ವ್ಯಕ್ತಿ ಸೆರೆ

ನವದೆಹಲಿ, ಆ.೪- ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಂಗಿದ್ದ ದೆಹಲಿಯ ಕೇರಳ ಹೌಸ್‌ಗೆ ಚಾಕು ಹೊಂದಿದ್ದ ವ್ಯಕ್ತಿ ಪ್ರವೇಶಿಸಲು ಯತ್ನಿಸಿದ ವೇಳೆ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು 46 ವರ್ಷದ ವಿಮಲ್ ರಾಜ್ ಎಂದು ಪೊಲೀಸರು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಈತ ಮಾನಸಿಕ ಅಸ್ವಸ್ಥ ಎನ್ನುವ ವಿಷಯ ತಿಳಿದು ಬಂದಿದ್ದು, ಈ ಸಂಬಂಧ ಹೆಚ್ಚಿನ ವಿಚಾರಣೆ ಬಳಿಕವಷ್ಟೇ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳ ಹೌಸ್ ನಲ್ಲಿ ತಂಗಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಲು ಮುಂದಾದಾಗ ಭದ್ರತಾ ಪಡೆ ಆತನನ್ನು ತಡೆದರು. ಆಗ ಬಂಧಿತ ವ್ಯಕ್ತಿ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಈ ಹಂತದಲ್ಲಿ ವ್ಯಕ್ತಿಯ ಬಳಿ ಚಾಕು ಇದ್ದುದ್ದನ್ನು ಗಮನಿಸಿದ ಪೊಲೀಸರು ಆತನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದ್ದಾರೆ.
ವಿಮಲ್ ರಾಜ್ ಎಲ್ಲಿಯವನು, ಯಾವ ಕಾರಣಕ್ಕಾಗಿ ಚಾಕು ಇಟ್ಟುಕೊಂಡು ಬಂದಿದ್ದ, ಎನ್ನುವ ವಿಷಯಕ್ಕೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Comment