ಸಿಎಂ ಪಟ್ಟದ ಮೇಲೆ ಕಣ್ಣು ಮೊಯಿಲಿ ಟಾಂಗ್

ಬೆಂಗಳೂರು, ಸೆ. ೧- ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ವೀರಪ್ಪ ಮೊಯ್ಲಿ ಇಂದು ಹೇಳಿದ್ದಾರೆ.

ಹೆಚ್.ಡಿ. ಕುಮಾರಸ್ವಾಮಿ ಅವರನ್ನು 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಸಲು ನಿರ್ಧರಿಸಲಾಗಿದೆ. ಹೀಗಾಗಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಲಿ ಇಲ್ಲದ ಮುಖ್ಯಮಂತ್ರಿಯ ವಿಷಯ ಈಗ ಅಪ್ರಸ್ತುತ. ಯಾರೂ ಕೂಡ ಈ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮತ್ತೆ ತಾವೇ ಮುಖ್ಯಮಂತ್ರಿಯಾಗುವುದಾಗಿ ಹೇಳಿಕೆ ನೀಡಿದ್ದರು. ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ಹಲವು ಸಚಿವರು, ಶಾಸಕರು, ಮುಖಂಡರುಗಳು ಬೆಂಬಲ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಕಂಪನ ಉಂಟಾಗಿ, ಶೀತಲಸಮರಕ್ಕೂ ಕಾರಣವಾಗಿತ್ತು.

Leave a Comment