ಸಿಎಂ, ಗೌಡರಿಗೆ ಜೈನರ ಅಭಿನಂದನೆ

ಬೆಂಗಳೂರು, ಏ. ೨೧- ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕಕ್ಕೆ 175 ಕೋಟಿ ರೂ. ಮಂಜೂರು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೈನ್ ಸಮುದಾಯಕ್ಕೆ ಅಪಾರ ಕೊಡುಗೆ ನೀಡಿರುವ ಮಾಜಿ ಪ್ರಧಾನಿ ಹೆಚ್.‌ಡಿ.ದೇವೇಗೌಡ ಅವರಿಗೆ ಏ. 24ರಂದು ಕರ್ನಾಟಕ ಜೈನ್ ಸಂಘ ಅಭಿನಂದನಾ ಸಮಾರಂಭ ಏರ್ಪಡಿಸಿದೆ.
ಅಂದು ಶ್ರವಣಬೆಳಗೊಳದ ಬಾಹುಬಲಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಜೈನ ಆಚಾರ್ಯರು, ಮುನಿಗಳು, ಸಾನಿಧ್ಯ ವಹಿಸಲಿದ್ದು, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರಹೆಗ್ಗಡೆ ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಜಿತೇಂದ್ರಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೈನ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನ, ಕೇಂದ್ರೀಯ ಸ್ಪರ್ಧಾತ್ಮಕ ಪರೀಕ್ಷೆಗೆ ವಿಶೇಷ ತರಬೇತಿ, ಎಂಫಿಲ್ ಮತ್ತು ಪಿಹೆಚ್‌ಡಿ ಸಂಶೋಧನೆಗೆ ವಿಶೇಷ ವಿದ್ಯಾರ್ಥಿ ವೇತನವನ್ನು ಹಾಗೂ ಜೀನ ಮಂದಿರಗಳ ಜೀರ್ಣೋದ್ಧಾರಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಮತ್ತು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಜೈನ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 20 ಲಕ್ಷ ರೂ.ಗಳ ವಿದ್ಯಾರ್ಥಿವೇತನ ಮಂಜೂರು ಮಾಡಿದ್ದಾರೆ. ಪ್ರಸಕ್ತ ಸಾಲಿನಿಂದ ಮಹಾವೀರ ಶಾಂತಿ ಪ್ರಶಸ್ತಿಯನ್ನು ಸರ್ಕಾರ ಪ್ರದಾನ ಮಾಡಿದ್ದು, ಪ್ರಶಸ್ತಿ 10 ಲಕ್ಷ ರೂ.ಗಳ ನಗದನ್ನು ಒಳಗೊಂಡಿದೆ. ಈ ಪ್ರಶಸ್ತಿಯನ್ನು ತುಮಕೂರು ಸಿದ್ದಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿ ಅವರಿಗೆ ಪ್ರದಾನ ಮಾಡಲಾಗಿದೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜೈನ ಸಮುದಾಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹಾಸನ ಸಂಸದರಾಗಿ ಮಸ್ತಕಾಭಿಷೇಕದ ಯಶಸ್ವಿಗಾಗಿ ಅವಿರತ ಶ್ರಮಿಸಿದ್ದಾರೆ. ದೇವೇಗೌಡರ ಸತತ ಪ್ರಯತ್ನದಿಂದ ಬೆಂಗಳೂರಿನಿಂದ ಶ್ರವಣಬೆಳಗೊಳ, ಹಾಸನಕ್ಕೆ ರೈಲು ಸೌಲಭ್ಯ ದೊರಕಿದೆ. ದೇವೇಗೌಡರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. 2 ಬಾರಿ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದಿಂದ ಮಹಾಮಸ್ತಕಾಭಿಷೇಕಕ್ಕೆ ಅನುದಾನ ಬಿಡುಗ‌ಡೆ ಮಾಡಲು ಒತ್ತಾಯಿಸಿದ್ದಾರೆ. ಈ ಎಲ್ಲಾ ಅವರ ಸೇವೆಯನ್ನು ಪರಿಗಣಿಸಿ ಅವರಿಗೂ ಸಹ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

Leave a Comment