ಸಿಎಂ ಕುರ್ಚಿ ಸಿದ್ದು ಆಲಾಪ : ಸರ್ಕಾರ ಪತನ ಬಿಜೆಪಿ ಹಗಲು ಕನಸು

ಹುಬ್ಬಳ್ಳಿ, ಆ. ೨೯- ಕೆಲದಿನಗಳ ಹಿಂದೆ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿಕೆ ನೀಡಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಕಂಪನಕ್ಕೆ ಕಾರಣವಾಗಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರು ಜನ ಬಯಸಿದರೆ, ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳುವ ಮೂಲಕ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.

  •  ಜನ ಬಯಸಿದರೆ ತಾವೇ ಸಿಎಂ.
  •  ಮತ್ತೆ ಸಿಎಂ ಆಗುವ ಆಸೆ ಬಿಚ್ಚಿಟ್ಟ ಸಿದ್ದರಾಮಯ್ಯ.
  •  ತಮ್ಮ ಹೇಳಿಕೆಗೆ ಕೆಲ ಸಚಿವರು, ಶಾಸಕರಿಂದ ಬೆಂಬಲ.
  •  ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ.
  •  ಸರ್ಕಾರ ಸುಭದ್ರ, ಏನೂ ಆಗುವುದಿಲ್ಲ.
  •  ಸರ್ಕಾರ ಬೀಳಿಸುವುದು ಬಿಜೆಪಿಯವರ ಕನಸು.
  •  ಹಿಂದಿನ ಸರ್ಕಾರ ಬಹುತೇಕ ಯೋಜನೆಗಳು ಜಾರಿ.
  •  ಸಮನ್ವಯ ಸಮಿತಿಯಲ್ಲಿ ಚರ್ಚಿಸಿಯೇ ಎಲ್ಲವೂ ನಿರ್ಧಾರ.

ಜನ ಬಯಸಿದರೆ, ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದ್ದೇನೆ. ಈಗಲೂ ಅದನ್ನೇ ಪುನರುಚ್ಚರಿಸುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಸರ್ಕಾರ ಏನೇ ನಿರ್ಧಾರ ಕೈಗೊಂಡರೂ, ಅದರ ಲಾಭ ಎರಡೂ ಪಕ್ಷಗಳಿಗೆ ಸಲ್ಲಲಿದೆ ಎಂದು ಹೇಳಿದ್ದಾರೆ.

ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಹೇಳಿದ್ದ ಹೇಳಿಕೆಗೆ ಹಲವು ಸಚಿವರು, ಶಾಸಕರು ಬೆಂಬಲ ಸೂಚಿಸಿದ್ದಾರೆ. ಅದರಲ್ಲಿ ತಪ್ಪೇನು? ಮುಂದಿನ ಬಾರಿ ಪಕ್ಷ ಅಧಿಕಾರಕ್ಕೆ ಬಂದರೆ, ಮುಖ್ಯಮಂತ್ರಿಯಾಗುತ್ತೇನೆ ಎಂದರು.

ಬಿಜೆಪಿಯವರ ಕನಸು

ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎನ್ನುವ ಬಗ್ಗೆ ಬಿಜೆಪಿ ನಾಯಕರು ಹಗಲುಗನಸು ಕಾಣುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಸಫಲವಾಗುವುದಿಲ್ಲ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಉತ್ತಮ ಆಡಳಿತ ನೀಡುತ್ತಿದ್ದೇವೆ ಎಂದರು.

ಸರ್ಕಾರದಲ್ಲಿ ಏನೇ ತೀರ್ಮಾನ ಕೈಗೊಂಡರೂ, ಅದನ್ನು ಸಮನ್ವಯ ಸಮಿತಿಯಲ್ಲಿ ಚರ್ಚಿಸಿಯೇ ಮುಂದುವರೆಯಲಾಗುತ್ತದೆ. ಹೀಗಿರುವಾಗ ತಮ್ಮನ್ನು ಕಡೆಗಣಿಸಲಾಗಿದೆ ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ. ತಮ್ಮ ಪಕ್ಷದವರೂ ಸಚಿವರಾಗಿದ್ದಾರೆ, ಸರ್ಕಾರದಲ್ಲಿ ಏನೇ ನಿರ್ಧಾರ ಕೈಗೊಂಡರೂ ಅದಕ್ಕೆ ಸಮನ್ವಯ ಸಮಿತಿಯ ಒಪ್ಪಿಗೆಯಿಂದಲೇ ಮಾಡಲಾಗಿರುತ್ತದೆ ಎಂದರು.

ಪಕ್ಷದ ಶಾಸಕರು ಬಿಜೆಪಿ ಸೇರುತ್ತಾರೆ ಎನ್ನವುದೆಲ್ಲಾ ಶುದ್ಧ ಸುಳ್ಳು. ಯಾವ ಶಾಸಕರೂ ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎನ್ನುವ ಕುರಿತು ಎಲ್ಲೂ ಹೇಳಿಲ್ಲ ಎಂದರು.

ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಬಹುತೇಕ ಯೋಜನೆಗಳನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮುಂದುವರೆಸಿದ್ದಾರೆ. ಅಲ್ಲದೆ, ಆ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಅನುದಾನದ ಸಮಸ್ಯೆ ಎದುರಾದರೆ, ತಾವು ಈ ಬಗ್ಗೆ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದರು.

ಜೆಡಿಎಸ್ ಶಾಸಕರು ಹಾಗೂ ಅದರ ನಾಯಕರು ಕಾಂಗ್ರೆಸ್ ನಾಯಕರ ವರ್ತನೆಗೆ ಬೇಸತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಗೆ ಪತ್ರ ಬರೆದಿದ್ದಾರೆ ಎನ್ನುವುದು ಸುಳ್ಳು. ಆ ರೀತಿಯ ಯಾವುದೇ ಪತ್ರವನ್ನು ಬರೆದಿಲ್ಲ. ಈ ವಿಷಯ ತಮ್ಮ ಗಮನಕ್ಕೂ ಬಂದಿಲ್ಲ ಎಂದರು.

Leave a Comment