ಸಿಎಂ ‘ಕುತಂತ್ರ’ ನಡೆಸಿದ್ದಾರೆ- ಬಿಎಸ್‌ವೈ ಆರೋಪ

ಬೆಂಗಳೂರು, ಫೆ ೧೨- ಎಸ್.ಐ.ಟಿ. ಮೇಲೆ ನಮಗೆ ವಿಶ್ವಾಸವಿಲ್ಲ. ಎಸ್.ಐ.ಟಿ. ಮುಖ್ಯಮಂತ್ರಿಯವರ ಕೆಳಗೆ ಬರುವುದರಿಂದ ನಾವು ಎಸ್.ಐ.ಟಿ. ತನಿಖೆಗೆ ಒಪ್ಪುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ ಅವರು, ಸಿಎಂ ಕುರ್ಚಿ ಉಳಿಸಿಕೊಳ್ಳಲು ರಾಜಕೀಯ ಕುತಂತ್ರ ನಡೆಸಿದ್ದಾರೆ. ಶಾಸಕರ ಪುತ್ರ ಶರಣಗೌಡ ತಮ್ಮನ್ನು ಭೇಟಿ ಮಾಡಲು ಹೋಗುತ್ತಿರುವುದಾಗಿ ಮುಖ್ಯಮಂತ್ರಿಗೆ ಹೇಳಿದಾಗ, ಅಂತಹ ಕೆಲಸ ಮಾಡಬೇಡ ಎಂದು ತಡೆಯಬಹುದಿತ್ತು. ಆದರೂ ನನ್ನ ಬಳಿಗೆ ಕಳುಹಿಸಿ ಅಲ್ಲಿ ಆಡಿಯೋ ರೆಕಾರ್ಡ್ ಮಾಡಿಸಿಕೊಂಡು ಅದನ್ನು ಬೇಕಾದಂತೆ ತಿರುಚಲಾಗಿದೆ ಎಂದು ದೂರಿದ್ದಾರೆ.

ಸಿಎಂ ಪತ್ರಿಕಾಗೋಷ್ಠಿ ನಡೆಸಿ ಆಡಿಯೋ ಬಗ್ಗೆ ತಿಳಿಸಿದಾಗ, ನಾನು ರಾಜಕೀಯ ನಿವೃತ್ತಿ ಪಡೆಯುವುದಾಗಿ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿದೆ. ಸ್ಪೀಕರ್ ಬಗ್ಗೆ ಮಾತನಾಡಿದ್ದರೆ ರಾಜಕೀಯ ನಿವೃತ್ತಿ ಎಂದು ಹೇಳಿದ್ದೆ. ೩೦ ನಿಮಿಷದ ಆಡಿಯೋ ಟೇಪ್ ಅನ್ನು ೨ -೩ ನಿಮಿಷಕ್ಕೆ ಸೀಮಿತಗೊಳಿಸಿ, ತಮಗೆ ಅನುಕೂಲವಾಗುವ ಅರ್ಥ ಬರುವ ರೀತಿ ಸಿಎಂ ತಿರುಚಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿಎಂ ಅವರು ಈ ವಿಚಾರದಲ್ಲಿ ದಂಡನಾರ್ಹ ತಪ್ಪು ಮಾಡಿದ್ದಾರೆ. ರಾಜಕೀಯ ನಿವೃತ್ತಿ ಮಾತಿಗೆ ನಾನು ಈಗಲೂ ಕೂಡ ಬದ್ಧವಾಗಿದ್ದೇನೆ. ಐಪಿಸಿ ಸೆಕ್ಷನ್ ಅಡಿ ಸಿಎಂ ಹಲವು ಅಪರಾಧಗಳನ್ನು ಮಾಡಿದ್ದಾರೆ. ತಮಗೆ ಬೇಕಾದಂತೆ ಆಡಿಯೋ ತಿರುಚಿದ್ದಾರೆ. ರಾಜಕೀಯ ದುರುದ್ದೇಶದಿಂದ ಇಂತಹ ಕೆಲಸ ಮಾಡಿದ್ದಾರೆ ಎಂದು ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಶಾಸಕರೆಲ್ಲ ತಿರುಗಿ ಬಿದ್ದಿದ್ದರಿಂದ ಸಿಎಂ ಕುರ್ಚಿ ಉಳಿಸಿಕೊಳ್ಳಲು ಇಂತಹ ಕುತಂತ್ರ ನಡೆಸಿದ್ದಾರೆ. ತನಿಖೆಯಾಗಿ ಸತ್ಯ ಹೊರಬರಲಿ. ಸದನ ಸಮಿತಿ ರಚಿಸಿ ತನಿಖೆ ಮಾಡಿ. ಇಂತಹ ಘಟನೆ ನಡೆದಾಗಲೂ ಉಭಯ ಪಕ್ಷಗಳ ನಾಯಕರನ್ನು ಕರೆದು ಚರ್ಚೆ ಮಾಡಿದ್ರೆ ಸದನದ ಸಮಯ ವ್ಯರ್ಥವಾಗುತ್ತಿರಲಿಲ್ಲ. ಎಸ್.ಐ.ಟಿ. ತನಿಖೆಗೆ ನಮ್ಮ ಒಪ್ಪಿಗೆ ಇಲ್ಲ ಎಂದು ಹೇಳಿದ್ದಾರೆ.

Leave a Comment