ಸಿಎಂ ಇಳಿಸುವ ಶಕ್ತಿ ಬೆಳಗಾವಿ ಜಿಲ್ಲೆಗೆ ಇದೆ ಕೋರೆ ವ್ಯಾಖ್ಯಾನ

ಬೆಂಗಳೂರು, ಸೆ. ೬- ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ಜಾರಕಿಹೊಳಿ ಬ್ರದರ್ಸ್ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಜಟಾಪಟಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು, ಅದಕ್ಕೂ ತಮಗೂ ಸಂಬಂಧವಿಲ್ಲ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಹೇಳಿದರು.
ವಿಧಾನಸೌಧದ ಆವರಣದಲ್ಲಿಂದು ನಡೆದ ಬಿಜೆಪಿ ಶಾಸಕರ ಧರಣಿ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮಿಹೆಬ್ಬಾಳ್ಕರ್ ಲಿಂಗಾಯತ ಸಮುದಾಯಕ್ಕೆ ಸೇರಿದವರು, ನಾನು ಅದೇ ಸಮುದಾಯಕ್ಕೆ ಸೇರಿದವನು ಎಂಬ ಕಾರಣಕ್ಕೆ ಈ ಜಟಾಪಟಿಗೂ ನನಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ. ನಾನು ನಿನ್ನೆಯಷ್ಟೇ ವಿದೇಶದಿಂದ ಬಂದಿದ್ದೇನೆ ಎಂದರು.
ಸಿಎಂ ಇಳಿಸೋದು, ಬೀಳಿಸೋದು ಬೆಳಗಾವಿ ರಾಜಕೀಯದ ತೀರ್ಮಾನ
ಯಾವುದೇ ಮುಖ್ಯಮಂತ್ರಿಯನ್ನು ಇಳಿಸುವ, ಬೀಳಿಸುವ ಶಕ್ತಿ ಬೆಳಗಾವಿ ರಾಜಕಾರಣಕ್ಕೆ ಇದೆ ಎಂದು ಮಾರ್ಮಿಕವಾಗಿ ಹೇಳಿದ ಅವರು, ಈ ಹಿಂದೆ ವೀರೇಂದ್ರಪಾಟೀಲ್ ಅವರನ್ನು ಮುಖ್ಯಮಂತ್ರಿ ಮಾಡಿದ್ದೆ ಬೆಳಗಾವಿ ರಾಜಕಾರಣ. ಅವರನ್ನು ಇಳಿಸಿದ್ದು ಬೆಳಗಾವಿ ರಾಜಕಾರಣವೇ, ಇದು ಎಲ್ಲರಿಗೂ ಗೊತ್ತಿರಲಿ ಎಂದರು.
ಬೆಳಗಾವಿಯವರು ಮುಖ್ಯಮಂತ್ರಿ ಆಗಿಲ್ಲ ನಿಜ. ಆದರೆ, ಸಿಎಂ ಮಾಡೋದು, ಸಿಎಂ ಇಳಿಸೋದು ಬೆಳಗಾವಿ ರಾಜಕಾರಣಿಗಳಿಗೆ ಗೊತ್ತಿದೆ ಎಂದು ಹೇಳಿದರು.
ಪಿಎಲ್‌ಡಿ ಬ್ಯಾಂಕ್‌ಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ಕಿತ್ತಾಟದಿಂದ ಬಿಜೆಪಿಗೆ ಎಷ್ಟು ಲಾಭವಾಗುತ್ತದೆ ಎಂಬುದನ್ನು ಕಾಯುತ್ತಿದ್ದೇವೆ ಎಂಬುದನ್ನು ಮಾರ್ಮಿಕವಾಗಿ ಹೇಳಿದರು.

Leave a Comment