ಸಿಎಂಗೆ ಮತ್ತೆ ಪತ್ರ ಬರೆದ ಸಿದ್ದು

ಬೆಂಗಳೂರು, ಜು.೧೧- ಸಮ್ಮಿಶ್ರ ಸರ್ಕಾರಕ್ಕೆ ಮುಜುಗರವಾಗುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಸಮರ ಮುಂದುವರೆಸಿದ್ದು, ತಾವು ಪ್ರತಿನಿಧಿಸಿರುವ ಬಾದಾಮಿ ಕ್ಷೇತ್ರಕ್ಕೆ ಸಮರ್ಪಕ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಮತ್ತೊಂದು ಪತ್ರ ಬರೆದಿದ್ದಾರೆ. ಇದರಿಂದ ಸರ್ಕಾರಕ್ಕೆ ಸಿದ್ದರಾಮಯ್ಯ ಬರೆದಿರುವ ಮೂರನೇ ಪತ್ರ ಇದಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಬಾದಾಮಿ ಕ್ಷೇತ್ರದಲ್ಲಿ ಮಾತ್ರ ಗೆದ್ದಿರುವ ಸಿದ್ದರಾಮಯ್ಯ ಈಗ ಸಂಪೂರ್ಣ ಬಾದಾಮಿ ಕ್ಷೇತ್ರದ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗೆ 3 ಪತ್ರಗಳನ್ನು ಬರೆದಿರುವ ಸಿದ್ದರಾಮಯ್ಯ, ಸರ್ಕಾರಿ ತಾಂತ್ರಿಕ ಮಹಾ ವಿದ್ಯಾಲಯ, ಬಾದಾಮಿ ಕೆರೂರು ಪಟ್ಟಣಕ್ಕೆ ಸರ್ಕಾರಿ ಐಟಿಐ ಕಾಲೇಜು, ಮತ್ತು ಗುಳೇದಗುಡ್ಡ ಪಟ್ಟಣಕ್ಕೆ ಪಶು ವೈದ್ಯಕೀಯ ಕಾಲೇಜು ಮಂಜೂರು ಮಾಡುವಂತೆ ಕೋರಿದ್ದಾರೆ.
ಅಲ್ಲದೆ, ಸರ್ಕಾರಿ ಐಟಿಐ ಕಾಲೇಜು ಮಂಜೂರಾತಿ ಸಂಬಂಧ ಕಾರ್ಮಿಕ ಸಚಿವ ವೆಂಕಟರಮಣಪ್ಪಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು ಪಶು ವೈದ್ಯಕೀಯ ಕಾಲೇಜು ಮತ್ತು ತಾಂತ್ರಿಕ ಮಹಾ ವಿದ್ಯಾಲಯ ಮಂಜೂರಾತಿಗಾಗಿ ನೇರವಾಗಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಈ ಮೊದಲು ಗುಳೇದಗುಡ್ಡದಲ್ಲಿ ಗಾರ್ಮೆಂಟ್ಸ್ ಪಾರ್ಕ್, ಬಾದಾಮಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ. ಕೆರೆಗಳಿಗೆ ನೀರು ತುಂಬುವ ಯೋಜನೆ ಬಗ್ಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಯಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಭೆ ನಡೆಸಲು ಸೂಚಿಸಿರುವುದಾಗಿ ತಿಳಿಸಿದ್ದರು. ಇದೀಗ ಮತ್ತೆ ಕ್ಷೇತ್ರದ ಅಗತ್ಯತೆಗಳ ಬಗ್ಗೆ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಸಿದ್ದರಾಮಯ್ಯ ಪುನಃ ಸರ್ಕಾರಕ್ಕೆ ಪತ್ರಗಳನ್ನು ಬರೆದಿದ್ದಾರೆ.
ಈ ಮೊದಲು ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರೂ ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ನಲ್ಲಿ ಸಿದ್ದು ಮನವಿಗೆ ಕವಡೆ ಕಾಸಿನ ಕಿಮ್ಮತ್ತು ಸಿಗದಿರುವುದನ್ನು ನೋಡಿದರೆ ಸಿದ್ದರಾಮಯ್ಯ ಹಾಗೂ ಕುಮಾರ ಸ್ವಾಮಿ ಅವರ ನ‌ಡುವೆ ಶೀತಲ ಸಮರ ನಡೆಯುತ್ತಿರುವುದು ಬಹಿರಂಗವಾದಂತಿದೆ.

Leave a Comment